ಯಾದಗಿರಿ | ಬೃಹತ್ ನೇತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ
ಸುರಪುರ : ರಾಜ್ಯದ ಜನರ ಆರೋಗ್ಯ ಕಾಪಾಡಲು ವಿವಿಧ ಕಾರ್ಯಕ್ರಮಗಳನ್ನು ಸರಕಾರ ಅನುಷ್ಠಾನಗೊಳಿಸುತ್ತಿದ್ದು, ಸುರಪುರ ಕ್ಷೇತ್ರದಲ್ಲಿ ಕೂಡಾ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಲಯನ್ಸ್ ಕ್ಲಬ್ ಸುರಪುರ ಹಾಗೂ ಬೆಂಗಳೂರನ ಶ್ರೀ ವಿವೇಕಾನಂದ ಸೇವಾಶ್ರಮ ಸಹಯೋಗದಲ್ಲಿ ಶುಕ್ರವಾರ ಮತ್ತು ಶನಿವಾರ ಹಮ್ಮಿಕೊಂಡಿರುವ ʼಬೃಹತ್ ನೇತ್ರ ಚಿಕಿತ್ಸಾ ಉಚಿತ ಶಿಬಿರʼವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜೂರುಗೊಳಿಸಲಾಗಿದ್ದು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಸಿಟಿ ಸ್ಕಾನ್, ಡಯಾಲಿಸಿಸ್ ಯಂತ್ರ ಮುಂತಾದ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಕಾಳಜಿ ವಹಿಸಬೇಕು ಎಂದ ಅವರು, ವಿವೇಕನಾಂದ ಸೇವಾಶ್ರಮ ಸಂಸ್ಥೆಯು ಇಂತಹ ಜನೋಪಯೋಗಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಅವರ ಸೇವಾ ಕಾರ್ಯ ಶ್ಲಾಘನೀಯ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಮಾತನಾಡಿ, ಬೆಂಗಳೂರನ ವಿವೇಕಾನಂದ ಸೇವಾಶ್ರಮ ಸಂಸ್ಥೆಯು ರಾಜ್ಯದಾದ್ಯಂತ ಇಂತಹ ಶಿಬಿರಗಳ ಮೂಲಕ 70 ಸಾವಿರಕ್ಕಿಂತ ಹೆಚ್ಚು ಜನರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ನಡೆಸಿದ್ದು, ಸಂಸ್ಥೆಯ ವೈದ್ಯರ ತಂಡ ಹಾಗೂ ಸಿಬ್ಬಂದಿ ವರ್ಗ ಶ್ರಮ ಬಹಳಷ್ಟಿದೆ ಎಂದರು.
ಮೊದಲನೇ ದಿನದಂದು 300 ಜನರು ನೊಂದಣಿ ಮಾಡಿಸಿದ್ದು ಈ ಪೈಕಿ ಅರ್ಹ 221 ಜನರಿಗೆ ವೈದ್ಯರ ತಂಡ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ ಎಂದು ಪತ್ರಿಕೆಯೊಂದಿಗೆ ಮಾತನಾಡಿ ತಿಳಿಸಿದರು.
ನಗರಸಭೆ ಅಧ್ಯಕ್ಷೆ ಹೀನಾಕೌಸರ್ ಶಕೀಲ್ ಅಹ್ಮದ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಮುಖಂಡರುಗಳಾದ ಮಲ್ಲಣ್ಣ ಸಾಹುಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಿರಾದಾರ, ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಡಾ.ಪದ್ಮಾನಂದ ಗಾಯಕವಾಡ, ವಿವೇಕಾನಂದ ಸೇವಾಶ್ರಮ ಸಂಸ್ಥೆಯ ಡಾ.ಹರಿಪ್ರಸಾದ, ಲಯನ್ಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಪಂಕಜಕುಮಾರ ಜೋಷಿ, ಕೋಶಾಧ್ಯಕ್ಷ ಸಿದ್ದಲಿಂಗಯ್ಯ ಕಡ್ಲಪ್ಪಮಠ, ಡಾ.ಹರ್ಷವರ್ಧನ, ಡಾ.ಪವನಕುಮಾರ ಜೋಷಿ, ಡಾ.ಎಮ್.ಎಸ್.ಕನಕರೆಡ್ಡಿ ಇತರರಿದ್ದರು.