ಯಾದಗಿರಿ | ಪ್ರತಿಭಾ ಪ್ರೋತ್ಸಾಹವು ಶ್ಲಾಘನೀಯ : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು
ಯಾದಗಿರಿ : ತಮ್ಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹದ್ಯೋಗಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೊತ್ಸಾಹ ನೀಡುತ್ತಿರುವುದು ಅತ್ಯುತ್ತಮ ಕೆಲಸವಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ. ಅದನ್ನು ಗುರುತಿಸುವಂತಹ ಕಾರ್ಯ ನಾವೆಲ್ಲರೂ ಮಾಡುವುದು ಅಗತ್ಯವಿದೆ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಆ ಪ್ರತಿಭೆಗೆ ಸಿಗುವ ಪ್ರೋತ್ಸಾಹ ತಪ್ಪಿದಂತಗಾಗುತ್ತದೆ. ತಮ್ಮ ಕ್ಷೇತ್ರದಲ್ಲಿನ ಸಹದ್ಯೋಗಿ ಪತ್ರಕರ್ತರ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕಿನ್ ಮತ್ತವರ ತಂಡದ ಕಾರ್ಯ ಮೆಚ್ಚುವಂತಹದ್ದು ಎಂದು ಹೇಳಿದರು.
ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಮೌಲಾಲಿ ಅನಪೂರ, ಬಿಎಸ್‌ಎಫ್ ಯೋಧ ದುರ್ಗಪ್ಪ ನಾಯಕ, ಪತ್ರಕರ್ತರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕಿನ್ ಮಾತನಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ನಗರ ಘಟಕ ಅಧ್ಯಕ್ಷರಾದ ಬಂದಪ್ಪ ಅರಳಿ, ವಿಶ್ವರಾಧ್ಯ ಪ್ರೆಸ್‌ನ ಮಾಲೀಕರಾದ ಸಿದ್ದು ಪಾಟೀಲ, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಕಲಾಲ, ಉಪಾಧ್ಯಕ್ಷರಾದ ರಾಜು ನಲ್ಲಿಕರ್, ಕಾರ್ಯದರ್ಶಿ ಸೈಯದ್ ಸಾಜೀದ್ ಹಯಾತ್, ಸಿದ್ದಪ್ಪ ಲಿಂಗೇರಿ, ತಾಲೂಕು ಅಧ್ಯಕ್ಷರುಗಳಾದ ಮಲ್ಲಿಕಾರ್ಜುನ ಮುದ್ನೂರ, ಭೀಮಶೇನರಾವ್ ಕುಲಕರ್ಣಿ ಸೇರಿದಂತೆ ಇತರರಿದ್ದರು.
ನಮ್ಮ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ. ಇಡೀ ವರ್ಷ ಎಲ್ಲರ ಮಕ್ಕಳ ಬಗ್ಗೆ ಅವರ ಸಾಧನೆ ಕುರಿತು ಬರಿತಿವಿ. ಆದರೆ ನಮ್ಮ ಮಕ್ಕಳ ಬಗ್ಗೆ ನಾವು ಹೆಮ್ಮೆಯಿಂದ ಹೇಳಬೇಕು. ಇಷ್ಟೊಂದು ಒತ್ತಡದ ಜೀವನದಲ್ಲಿಯೂ ನಮ್ಮ ಮಕ್ಕಳ ಸಾಧನೆ ಗುರುತಿಸುವ ಕೆಲಸ ನಮ್ಮಿಂದಲೇ ಆಗಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ನಮ್ಮ ಮಕ್ಕಳ ಬಗ್ಗೆ ನಾವೇ ಪತ್ರಿಕೆಯಲ್ಲಿ ಬರೆಯುವುದಿಲ್ಲ. ಇದನ್ನು ಮನಗೊಂಡು ನಾವು 3ವರ್ಷದಿಂದ ಪತ್ರಕರ್ತ ಮಕ್ಕಳ ಪ್ರತಿಭೆ ಗುರುತಿಸಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾಡುತ್ತಾ ಬರುತ್ತಿದ್ದೇವೆ.
-ಮಲ್ಲಪ್ಪ ಸಂಕೀನ್ ಜಿಲ್ಲಾಧ್ಯಕ್ಷರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಯಾದಗಿರಿ
ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಒಟ್ಟು 8 ವಿದ್ಯಾರ್ಥಿಗಳಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಲಾ 5 ಸಾವಿರ ರೂ. ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪ್ರಮಾಣ ಪತ್ರವನ್ನು ನೀಡಿ ಅವರಿಗೆ ಗೌರವಿಸಲಾಯಿತು. ಇದೇ ವೇಳೆ ಶಾಸಕ ಚೆನ್ನಾರಡ್ಡಿ ಪಾಟೀಲ ತುನ್ನೂರ ಕೂಡ ಮಕ್ಕಳಿಗೆ ತಮ್ಮ ವತಿಯಿಂದ ತಲಾ 2 ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಿದರು.