ಯಾದಗಿರಿ, ಸೆ.18: ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ತಲಾ 1 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಕ್ರಿಯಾ ಯೋಜನೆ ಅನುಸಾರ ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಪತ್ತು ನಿರ್ವಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ತೀವ್ರ ಬರದ ಹಿನ್ನೆಲೆಯಲ್ಲಿ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪೂರ್ವಭಾವಿ ಸಿದ್ಧತೆ ಕೈಗೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವನ್ನು ಕ್ಷೇತ್ರವಾರು ನಿರಂತರವಾಗಿ ಪರಿಶೀಲಿಸಿ, ನೀರಿನ ಮಿತಬಳಕೆ ಹಾಗೂ ಸಮರ್ಪಕ ನಿರ್ವಹಣೆಗೆ ವಿಶೇಷ ನಿಗಾ ವಹಿಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿದರು.

ಜಲಧಾರೆ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳನ್ನು ವೇಗಗೊಳಿಸಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಾರಾಯಣಪುರ, ಸನ್ನತಿ ಹಾಗೂ ಬ್ಯಾರೇಜ್ ನೀರಿನ ಲಭ್ಯತೆ ಕುರಿತು ಮಾಹಿತಿ ಪಡೆದು, ತುರ್ತು ಪರಿಸ್ಥಿತಿಗೆ ಅನುಗುಣವಾಗಿ ನೀರಿನ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಬರಗಾಲದ ಹಿನ್ನೆಲೆಯಲ್ಲಿ ವಿ.ಬಿ.ಜಿ. ರಾಮ್ ಜಿ ಯೋಜನೆಯಡಿ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಿ, ಗ್ರಾಮೀಣ ಪ್ರದೇಶಗಳಿಂದ ವಲಸೆ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದರು. ಮಾನವ ದಿನಗಳ ಸೃಜನೆಯಲ್ಲಿ ಹಿಂದುಳಿದ ಗ್ರಾಮ ಪಂಚಾಯಿತಿಗಳ ಸಿಬ್ಬಂದಿಗೆ ತರಬೇತಿ ನೀಡಿ, ಉತ್ತಮವಾಗಿ ಕಾರ್ಯನಿರ್ವಹಿಸುವವರಿಗೆ ಪ್ರೋತ್ಸಾಹ ನೀಡುವಂತೆ ಸೂಚಿಸಿದರು.

ಕೃಷಿಯ ಜೊತೆಗೆ ತೋಟಗಾರಿಕೆ ಇಲಾಖೆಯೂ ಕ್ಲಸ್ಟರ್ ಮಾದರಿಯಲ್ಲಿ ಯೋಜನೆ ರೂಪಿಸಬೇಕು. ಗುರುಮಠಕಲ್ ಹಾಗೂ ಸುರಪುರ ಅರಣ್ಯ ಪ್ರದೇಶಗಳಲ್ಲಿ ಹಣ್ಣು ಬೆಳೆಗಳಿಗೆ ಉತ್ತಮ ಅವಕಾಶ ಇರುವುದರಿಂದ ವಿಶೇಷ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಗ್ರಾಮೀಣ ಕುಡಿಯುವ ನೀರು ಸರಬರಾಜು, ಅರಣ್ಯ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಬರ ನಿರ್ವಹಣೆಯಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಲಾಯಿತು.

ಶಾಲಾ ಶಿಕ್ಷಣ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಪರಸ್ಪರ ಸಹಕಾರದೊಂದಿಗೆ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವುದು, ಫಲಿತಾಂಶ ಸುಧಾರಣೆ ಹಾಗೂ ಉತ್ತಮ ಶೈಕ್ಷಣಿಕ ಸಾಧನೆಗೆ ಆದ್ಯತೆ ನೀಡುವಂತೆ ಮನೋಜ್ ಜೈನ್ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರು ಉಪಸ್ಥಿತರಿದ್ದು, ವಿವಿಧ ಜಲಾಶಯಗಳ ನೀರಿನ ಪ್ರಮಾಣ, ನಿರ್ವಹಣೆ, ಕೃಷ್ಣಾ,ಭೀಮಾ ನದಿ ನೀರಿನ ಪ್ರಮಾಣ ಇತರೆ ಅವಶ್ಯಕ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor