ಯಾದಗಿರಿ : ಬರ ಘೋಷಣೆ ಮಾಡುವುದರಲ್ಲಿ ಕಾಲಹರಣ ಮಾಡದೇ ತಕ್ಷಣ ಪರಿಹಾರ ಕಾಮಗಾರಿಗಳನ್ನು ಆರಂಭಿಸಿ ರೈತರ ನೆರವಿಗೆ ಬರಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಸರ್ಕಾರವನ್ನು ಒತ್ತಾಯಿಸಿದೆ.

ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಈ ಕುರಿತು ಹೇಳಿಕೆ ನೀಡಿ, ಜಿಲ್ಲೆಯ ರೈತರು ತೀವ್ರ ಸಂಕಷ್ಟದಲ್ಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ವಿಶೇಷ ಬರಗಾಲ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.

ಬರ ಪರಿಹಾರ ಕಾಮಗಾರಿಗಳನ್ನು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕು. ವಿ.ಬಿ.ಜಿ. ರಾಮ್ ಜಿ. ಯೋಜನೆಯಡಿ ಮಾನವ ದಿನಗಳನ್ನು 120ರಿಂದ 150ಕ್ಕೆ ಹೆಚ್ಚಿಸಿ ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಬೇಕು. ನದಿಗಳಲ್ಲಿ ಲಭ್ಯವಿರುವ ನೀರನ್ನು ಬಳಸಿ ಜಿಲ್ಲೆಯ ಕೆರೆಗಳನ್ನು ತುಂಬಿಸಬೇಕು ಎಂದು ಅವರು ಒತ್ತಾಯಿಸಿದರು.

ಬರ ಪರಿಸ್ಥಿತಿಯಲ್ಲಿ ರೈತರಿಗೆ ಸಾಲ ವಸೂಲಾತಿ ನೋಟಿಸ್ ನೀಡದಂತೆ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಬರ ಪರಿಹಾರದ ಮೊತ್ತವನ್ನು ಪರಿಷ್ಕರಿಸಿ ಮೂರು ಪಟ್ಟು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ರೈತರ ಸಾಲ ಮನ್ನಾ ಮಾಡಬೇಕು. ಜಲಾಶಯಗಳಲ್ಲಿರುವ ನೀರನ್ನು ಕೈಗಾರಿಕೆಗಳಿಗೆ ಪೂರೈಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಕುಡಿಯುವ ನೀರಿಗಾಗಿ ಸಂಗ್ರಹಿಸಿಡಬೇಕು ಎಂದು ಭೀಮುನಾಯಕ ಹೇಳಿದರು.

ಬರ ಹಿನ್ನೆಲೆಯಲ್ಲಿ ತಕ್ಷಣ ಗೋಶಾಲೆ ಹಾಗೂ ಮೇವು ಬ್ಯಾಂಕ್ ಆರಂಭಿಸಬೇಕು. ಬೆಳೆ ವಿಮೆ ಪರಿಹಾರವನ್ನು ರೈತರಿಗೆ ಶೀಘ್ರವಾಗಿ ದೊರಕಿಸಬೇಕು. ವಿದ್ಯುತ್ ಸಮಸ್ಯೆ ನಿವಾರಣೆಗೆ ಅಗತ್ಯವಿದ್ದರೆ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.

ಬರದಿಂದ ಕಂಗೆಟ್ಟ ರೈತರಲ್ಲಿ ಆತ್ಮವಿಶ್ವಾಸ ಮೂಡಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು. ಪಕ್ಷಭೇದ ಮರೆತು ಜಿಲ್ಲೆಯ ಎಲ್ಲ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಪರಿಹಾರ ಹಾಗೂ ಸಾಲಮನ್ನಾಕ್ಕೆ ದನಿ ಎತ್ತಬೇಕು ಎಂದು ಅವರು ಕರೆ ನೀಡಿದರು.

ಸರ್ಕಾರ ಕೂಡಲೇ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಟಿ.ಎನ್. ಭೀಮುನಾಯಕ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಶ್ ಹತ್ತಿಮನಿ, ನಿಂಗಪ್ಪ ಗುಡಗುಡಿ, ವಿಶ್ವರಾಜ ಪಾಟೀಲ್ ಹೊನಗೇರಾ ಸೇರಿದಂತೆ ಹಲವು ಮುಖಂಡರು ಬೆಂಬಲ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor