ಯಾದಗಿರಿ | ಸಾರ್ವಜನಿಕರ ಹಿತದೃಷ್ಟಿಯಿಂದ ಗ್ರಾಮ ಆಡಳಿತ ಅಧಿಕಾರಿಗಳ ನ್ಯಾಯಯುತ ಬೇಡಿಕೆ ಈಡೇರಿಸಿ : ಭೀಮುನಾಯಕ ಆಗ್ರಹ
ಯಾದಗಿರಿ : ಗ್ರಾಮ ಆಡಳಿತ ಅಧಿಕಾರಿಗಳ ನ್ಯಾಯಯುತ ಬೇಡಿಕೆಗಳ ಮುಷ್ಕರಕ್ಕೆ ಬೆಂಬಲವಿದ್ದು, ತಕ್ಷಣ ಮುಷ್ಕರ ನಿರತರೊಂದಿಗೆ ಸರ್ಕಾರ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಿ ಜನತೆಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿಎನ್.ಭೀಮುನಾಯಕ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸರ್ಕಾರ ಹಾಗೂ ಜನತೆಯ ಮದ್ಯೆ ಸೇತುವೆಯಂತೆ ಕೆಲಸ ಮಾಡುವ ಗ್ರಾಮಾಡಳಿತ ಅಧಿಕಾರಿಗಳ ಮುಷ್ಕರದಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ.
ಶಾಲಾ ಮಕ್ಕಳ ಸ್ಕಾಲರ್ ಶಿಪ್ ಅರ್ಜಿ ಸಲ್ಲಿಸುವಾಗ ಜಾತಿ ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್ ತಿದ್ದುಪಡಿ 371ಜೆ ಪ್ರಮಾಣ ಪತ್ರ, ರೈತರ ವಿವಿಧ ಪ್ರಮಾಣಪತ್ರ ವಿದ್ಯಾರ್ಥಿಗಳಿಗೆ ಬೇಕಾದ ಪ್ರಮಾಣಪತ್ರ ಮುಂತಾದವುಗಳು ಪಡೆಯಲು ಕಂದಾಯ ಗ್ರಾಮೀಣಾಧಿಕಾರಿಗಳ ದೃಢೀಕರಣ ಅಗತ್ಯವಾಗಿರುವ ಈ ಸಂದರ್ಭದಲ್ಲಿ ಗ್ರಾಮೀಣ ಜನತೆ ವಿದ್ಯಾರ್ಥಿಗಳು, ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕಳೆದ 4 ದಿನಗಳಿಂದ ಮುಷ್ಕರ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಸಮಸ್ಯೆ ತೀವ್ರತೆ ಅರಿತು ಇತ್ಯರ್ಥಕ್ಕೆ ಮುಂದಾಗಬೇಕಿತ್ತು. ಆದರೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಗಳು ಹಾಗೂ ಜನಪ್ರತಿನಿಧಿಗಳು ತಮ್ಮದೇ ಆದ ವರ್ತುಲದಲ್ಲಿ ಉಳಿದುಕೊಂಡಿರುವುದರಿಂದ ಸಮಸ್ಯೆ ಜಟಿಲವಾಗುತ್ತಿದೆ.
ಅದರಲ್ಲೂ ವಿಶೇಷವಾಗಿ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಮುಷ್ಕರದ ಬಿಸಿ ತಟ್ಟುತ್ತಿದೆ. ಸರ್ಕಾರ ಕೂಡಲೇ ಮುಷ್ಕರ ನಿರತರೊಂದಿಗೆ ಮಾತನಾಡಿ ನ್ಯಾಯಯುತ ಬೇಡಿಕೆಗಳು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೂಡಲೇ ಸರ್ಕಾರ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗದಿದ್ದಲ್ಲಿ ಕರವೇ ಉಗ್ರ ಹೋರಾಟಕ್ಕೆ ಮುಂದಾಗಲಿದೆ ಎಂದು ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಯಮುನಯ್ಯ ಗುತ್ತೇದಾರ, ವಿಶ್ವರಾಜ ಹೊನಗೇರಾ, ವೆಂಕಟೇಶ ನಾಯಕ ಬೈರಿಮಡ್ಡಿ, ಅಬ್ದುಲ್ ಚಿಗಾನೂರ, ಶರಣಬಸಪ್ಪ ಯಲ್ಹೇರಿ, ಬಸವರಾಜ ಚೆನ್ನೂರ ಹುಣಸಗಿ, ಅಬ್ದುಲ್ ಹಾದಿಮನಿ ಕಟುವಾದ ಎಚ್ಚರಿಕೆ ನೀಡಿದ್ದಾರೆ.