ಯಾದಗಿರಿ | ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಹುದ್ದೆಗಳ ನೇಮಕಾತಿಯು ಪಾರದರ್ಶಕವಾಗಿ ನಡೆಸಿ : ಡಾ.ಸುಶೀಲಾ ಬಿ.
ಯಾದಗಿರಿ : ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಯು ಪಾರದರ್ಶಕವಾಗಿ ಹಾಗೂ ಮಧ್ಯವರ್ತಿಗಳು ಪಾಲ್ಗೊಳ್ಳದಂತೆ ಎಚ್ಚರವಹಿಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಇಂದು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾದಗಿರಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿಯಿರುವ ಒಟ್ಟು 159-ಅಂಗನವಾಡಿ ಕಾರ್ಯಕರ್ತೆಯರ ಹಾಗೂ 311-ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಪಡೆಯಲಾಗಿದ್ದು, ಈ ಅರ್ಜಿಗಳನ್ನು ಸೂಕ್ಷ್ಮವಾಗಿ ಇಲಾಖಾ ಮಾರ್ಗಸೂಚಿಗಳನ್ವಯ ಪರಿಶೀಲಿಸಿ, ಪಾರದರ್ಶಕವಾಗಿ ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಬೇಕು. ಅಲ್ಲದೆ ನೇಮಕಾತಿಯಲ್ಲಿ ಯಾವುದೇ ರೀತಿಯ ಮಧ್ಯವರ್ತಿಗಳು ಪಾಲ್ಗೊಳ್ಳದಂತೆ ಎಚ್ಚರವಹಿಸಿಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರ ನೇಮಕಾತಿಯಲ್ಲಿ ಅಕ್ರಮಗಳು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿ ಅಥವಾ ಸಿಬ್ಬಂದಿಗಳ ಮೇಲೆ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಹಾಗೂ ಅಂಥವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲವೀಶ್ ಒರಡಿಯಾ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.