×
Ad

ಯಾದಗಿರಿ | ಮಡಿವಾಳ ಮಾಚಿದೇವರು ನೇರ ನುಡಿಯ ವಚನಕಾರರು : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್

Update: 2025-02-01 18:21 IST

ಯಾದಗಿರಿ : ಹನ್ನೆರಡನೇಯ ಶತಮಾನದ ಶರಣರಲ್ಲಿ ಮಡಿವಾಳ ಮಾಚಿದೇವ ಓರ್ವ ದಿಟ್ಟ, ನೇರ ನುಡಿ ಮತ್ತು ದೈವಿಸಂಭೂತ ವ್ಯಕ್ತಿತ್ವ ಹೊಂದಿದ್ದರು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಜಿಲ್ಲಾಡಳಿತ, ನಗರಸಭೆ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಡಿಗ್ರಿ ಕಾಲೇಜಿನ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇಚ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಡಿವಾಳ ಮಾಚಿದೇವ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಿ ಅವರು ಮಾತನಾಡಿದರು.

ಸಮಾಜ ಮತ್ತು ಜನರ ಮನಸ್ಸು ಎರಡನ್ನು ತಮ್ಮ ವಚನಗಳ ಮೂಲಕ ಶುದ್ಧಗೊಳಿಸಿದ ದಿಟ್ಟ ವಚನಕಾರರಾಗಿದ್ದರು. ಇವರನ್ನು ಅನೇಕರು ವೀರಭದ್ರನ ರೂಪದಲ್ಲಿ ಕಂಡು ಪೂಜಿಸುತ್ತಾರೆ. ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕೆಂದರು.

ಸಮಾಜದ ಬೇಡಿಕೆಯಂತೆಯೇ ನಗರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ತಾವು ಬದ್ಧ, ಆದರೇ ನಗರಸಭೆಯಿಂದ ನಿವೇಶನ ಪಡೆಯುವುದು ಸಮಾಜದ ಮುಖಂಡರ ಕೆಲಸ. ಭವನಕ್ಕೆ ಬೇಕಾದ ಅನುದಾನ ಕೆಕೆಆರ್ ಡಿಬಿಯಿಂದ ಒದಗಿಸುವುದಾಗಿ ಶಾಸಕರು ಭರವಸೆ ನೀಡಿದರು.

ಇನ್ನೂ ಈ ಸಮಾಜವನ್ನು ಎಸ್. ಸಿ ಸೇರಿಸುವ ಕೆಲಸ ನನ್ನೊಬ್ಬವನಿಂದಲೇ ಸಾಧ್ಯವಿಲ್ಲ.ನೀವು ಒಗ್ಗಟ್ಟಾಗಿ ಸರಕಾರಗಳ ಮುಂದೆ ಬೇಡಿಕೆ ಇಟ್ಟರೇ ನಾವು ಜನಪ್ರತಿನಿಧಿಗಳು ಸಂಬಂಧಪಟ್ಟವರಿಗೆ ಹೇಳಬಹುದೆಂದರು.

ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಮಾತನಾಡಿ, ಮಡಿವಾಳ ಮಾಚಿದೇವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕೆಂದರು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕೆಂದರು.

ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಮರಿಯಪ್ಪ ನಾಟೇಕಾರ, ಮಡಿವಾಳ ಮಾಚಿದೇವ ಓರ್ವ ಗಟ್ಟಿ ಧ್ವನಿಯ ವಚನಕಾರ, ಅವರ ವಚನಗಳು ಸಮಾಜದ ಮೌಢ್ಯ, ಅಂದಕಾರಗಳನ್ನು ತೊಡೆದುಹಾಕುವಲ್ಲಿ ಸಾಕಷ್ಟು ಕೆಲಸ ಮಾಡಿವೆ ಎಂದರು.

ಕಾರ್ಯಕ್ರಮದಲ್ಲಿ ಡಾ.ಮರೆಪ್ಪ ನಾಟೇಕರ್ ಮಡಿವಾಳ ಮಾಚಿದೇವ ಕುರಿತು ಉಪನ್ಯಾಸ ನೀಡಿದರು. ಸಮಾಜದ ಜಿಲ್ಲಾಧ್ಯಕ್ಷ ಮಡಿವಾಳಪ್ಪ ಬಿಜಾಸಪುರ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಇದ್ದರು. ಕಲಾವಿದ ರಮೇಶ ಯಾಗಳಿ ಸ್ವಾಗತ ಗೀತೆ ಹಾಡಿದರು. ಡಾ.ಪರಶುರಾಮ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News