×
Ad

ಯಾದಗಿರಿ | ಎಸೆಸೆಲ್ಸಿ ಫಲಿತಾಂಶ ಸುಧಾರಣೆಗೆ ಅಧಿಕಾರಿಗಳು ವಿಶೇಷ ಗಮನ ನೀಡಿ ; ಜಿಲ್ಲಾಧಿಕಾರಿ ಡಾ.ಸುಶೀಲ ಬಿ.

Update: 2025-02-09 17:49 IST

ಯಾದಗಿರಿ : ಜಿಲ್ಲೆಯಲ್ಲಿ ಎಸೆಸೆಲ್ಸಿ ಫಲಿತಾಂಶ ಉತ್ತಮಪಡಿಸುವ ವಿನೂತನ ಕಾರ್ಯಕ್ರಮಗಳ ಮೂಲಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಯೋಜನೆ, ಕಾರ್ಯರೂಪಕ್ಕೆ ತರಲು ಸಂಬಂಧಿಸಿದ ಅಧಿಕಾರಿಗಳು ವಿಶೇಷ ಗಮನ ನೀಡುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಸೂಚಿಸಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಎಸೆಸೆಲ್ಸಿ ಫಲಿತಾಂಶ ಸುಧಾರಣೆ ಕುರಿತಂತೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರೊಂದಿಗೆ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಪ್ರಗತಿಯನ್ನು ನಿರ್ಧರಿಸುವ ಹಲವಾರು ಸೂಚ್ಯಂಕಗಳಲ್ಲಿ ಶಿಕ್ಷಣದ ಗುಣಮಟ್ಟವು ಒಂದು. ಸಾಮಾನ್ಯವಾಗಿ ಶಿಕ್ಷಣದ ಗುಣಮಟ್ಟವನ್ನು ಎಸೆಸೆಲ್ಸಿ ಮತ್ತು ಪಿಯುಸಿ ಫಲಿತಾಂಶದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಯಾದಗಿರಿ ಜಿಲ್ಲೆಯ ಎಸೆಸೆಲ್ಸಿ ಫಲಿತಾಂಶ ಬೇರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಎಲ್ಲಾ ಜಿಲ್ಲೆಗಳಿಗಿಂತ ಕಡಿಮೆ ಇದೆ. ಈ ಬಾರಿ ಎಸೆಸೆಲ್ಸಿ ಫಲಿತಾಂಶವನ್ನು ಉತ್ತಮಪಡಿಸುವ ದೆಸೆಯಲ್ಲಿ ಅನೇಕ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಯೋಜನೆ ತರಲಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ದಿಶೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಸೂಚನೆ ನೀಡಿದರು.

ಈ ದಿಶೆಯಲ್ಲಿ ಯಲ್ಲಿ ಉತ್ತಮ ವಾತಾವರಣ ರೂಪಿಸಲು ಪಾಲಕರ ಮತ್ತು ಪೋಷಕರ ಮನವೊಲಿಸಿ ಮನೆಯಲ್ಲಿ ಟಿವಿ ಮೊಬೈಲ್ ಬಳಸದಂತೆ ನಿಗಾ ವಹಿಸುವಂತೆಯೂ ಸಲಹೆ ನೀಡಲು ಸೂಚಿಸಲಾಯಿತು.

ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ರಾತ್ರಿ ವೇಳೆ ತರಗತಿಗಳನ್ನು ಹಮ್ಮಿಕೊಳ್ಳಲು ವ್ಯವಸ್ಥೆ ಕಲ್ಪಿಸಲು ಕೋರಿದ ಅವರು, "ನಮ್ಮ ಮಕ್ಕಳು ನಮ್ಮ ಹೆಮ್ಮೆ" ಎಂಬುದನ್ನು ಮತ್ತು ಅವರ ಉಜ್ವಲ ಭವಿಷ್ಯ ರೂಪಿಸಲು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಲವೀಶ್ ಒರಡಿಯಾ ಅವರು ಮಾತನಾಡಿ, ಜಿಲ್ಲೆಯ ಫಲಿತಾಂಶವನ್ನು ಉತ್ತಮಪಡಿಸಲು 20 ಅಂಶಗಳ ಕಾರ್ಯಕ್ರಮಗಳನ್ನು ಇಲಾಖೆಯು ಜಾರಿಗೊಳಿಸುತ್ತಿದ್ದು, ಉತ್ತಮ ರೀತಿಯಲ್ಲಿ ಪಾಲಕರು ಹಾಗೂ ಶಿಕ್ಷಕರು ಅವುಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಶಾಲಾ ಅವಧಿಯ ನಂತರ ಅವರಿಗೆ ಮನೆಯಲ್ಲಿಯೇ ಓದಿಕೊಳ್ಳುವಂತಾಗಲು ಉತ್ತಮ ಮೇಲ್ವಿಚಾರಣೆ ಅಗತ್ಯವಿದೆ. ಇದಕ್ಕಾಗಿ ತಾವೆಲ್ಲರೂ ಸಹಕರಿಸಲು ಅವರು ಕೋರಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಸಿ.ಎಸ್ ಮುಧೋಳ್ ಅವರು ಮಾತನಾಡಿ, ಇಲ್ಲಿಯವರಿಗೆ ಜಿಲ್ಲೆಯ ಫಲಿತಾಂಶ ಸುಧಾರಣೆಗಾಗಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ತಿಳಿಸಿ ಪಾಲಕ- ಪೋಷಕರಿಂದ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರುಗಳಿಂದ ಬೇಕಾದ ಸಹಕಾರದ ಕುರಿತು ವಿವರಿಸಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳು ಹಾಗೂ ಆಯಾ ತಾಲೂಕಿನ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News