ಯಾದಗಿರಿ | ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ : ಜಿಲ್ಲಾಧಿಕಾರಿ
ಯಾದಗಿರಿ : ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಹಾಪುರ, ಸುರಪುರ, ಯಾದಗಿರಿ ,ಗುರಮಠಕಲ್ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ ಖಾಲಿಯಾಗಿರುವ 159- ಅಂಗನವಾಡಿ ಕಾರ್ಯಕರ್ತೆ ಹಾಗೂ 311-ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳು, ಏಜೆಂಟರು ಅಥವಾ ಅನ್ಯ ವ್ಯಕ್ತಿಗಳ ಮುಖಾಂತರ ವಾಮ ಮಾರ್ಗದ ಮೂಲಕ ಹಣಕಾಸು ನೀಡಿ ಆಯ್ಕೆ ಹೊಂದಲು ಪ್ರಯತ್ನಿಸಿದಲ್ಲಿ ಅಂತಹವರ ವಿರುದ್ಧ ಕಾನೂನಿನ ರೀತ್ಯ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ತಿಳಿಸಿದ್ದಾರೆ.
ಅದರಂತೆ ಅರ್ಜಿದಾರರಿಗೆ ನೇಮಕಾತಿ ಮಾಡಿಕೊಡುವುದಾಗಿ, ಯಾವುದೇ ವ್ಯಕ್ತಿಗಳಿಂದ ತಮಗೆ ಹಣ ನೀಡಿದ್ದಲ್ಲಿ, ಆಯ್ಕೆ ಮಾಡಿ ಕೊಡುವುದಾಗಿ ಹೇಳಿದ್ದಲ್ಲಿ ಅಂತಹವರನ್ನು ಕಿವಿಗೊಡದೆ ಅವರ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿಗೆ, ಜಿಲ್ಲಾ ಪಂಚಾಯತ್ ಗೆ ಹಾಗೂ ಯಾದಗಿರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ, ಉಪನಿರ್ದೇಶಕರಿಗೆ ಲಿಖಿತ ರೂಪದಲ್ಲಿ ಅಥವಾ ಜಿಲ್ಲಾಧಿಕಾರಿಗಳ ಕಚೇರಿ, ದೂರವಾಣಿ ಸಂಖ್ಯೆ 08473 253 700 ಗೆ ದೂರು ನೀಡಲು ಅವರು ತಿಳಿಸಿದ್ದಾರೆ.
ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಹಪುರ್, ಸುರಪುರ್, ಯಾದಗಿರಿ, ಗುರುಮಠಕಲ್ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ 159 ಅಂಗನವಾಡಿ ಕಾರ್ಯಕರ್ತೆ ಹಾಗೂ 311 ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿ ಈಗಾಗಲೇ ಪ್ರಕಟಣೆ ಹೊರಡಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಇಲಾಖಾ ಮಾರ್ಗಸೂಚಿಯನ್ವಯ ತಾಲೂಕು ಮಟ್ಟದ ಸಮಿತಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಜಿಲ್ಲಾಮಟ್ಟದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕರ ಆಯ್ಕೆ ಸಮಿತಿ ಸಭೆಯಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
ಅದರಂತೆ ಈಗಾಗಲೇ ತಾಲೂಕು ಮಟ್ಟದ ಪರಿಶೀಲನಾ ಸಮಿತಿಗಳಿಂದ ಪರಿಶೀಲನೆಗೊಂಡ ಅರ್ಜಿಗಳನ್ನು ಜಿಲ್ಲಾಮಟ್ಟದಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿತಗೊಂಡಿರುವ ಸಮಿತಿಯ ಮೂಲಕ ತಿರಸ್ಕೃತಗೊಂಡ ಅರ್ಜಿಗಳನ್ನು ಮರು ಪರಿಶೀಲನೆ ಕೈಗೊಳ್ಳಲಾಗುತ್ತಿದ್ದು, ಕೂಡಲೇ ನೇಮಕಾತಿ ಮಾರ್ಗಸೂಚಿಯಂತೆ ಮೆರಿಟ್ ಆಧಾರದ ಮೇಲೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಕಾರಣ ಸಂಬಂಧಿಸಿದ ಅಭ್ಯರ್ಥಿಗಳು ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗಬಾರದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.