ಯಾದಗಿರಿ | ವಿಕಲಚೇತನರಿಗೆ ಸರ್ಕಾರ ಜಾರಿಗೊಳಿಸಿದ ಯೋಜನೆಗಳಡಿ ಸೌಲಭ್ಯಗಳನ್ನು ಕಲ್ಪಿಸಿ : ದಾಸ್ ಸೂರ್ಯವಂಶಿ
ಯಾದಗಿರಿ : ಕಡುಬಡವರು ಹಾಗೂ ತೀರ ಕಷ್ಟದಲ್ಲಿರುವಂತಹ ವಿಕಲಚೇತನರಿಗೆ ಸರ್ಕಾರ ಜಾರಿಗೊಳಿಸಿದ ಯೋಜನೆಗಳಡಿ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅವರಿಗೆ ಮುಖ್ಯ ವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ವಿಕಲಚೇತನರ ಹಕ್ಕುಗಳ ಅಧಿನಿಯಮದಡಿಯ ರಾಜ್ಯ ಆಯುಕ್ತರಾದ ಶ್ರೀ ದಾಸ್ ಸೂರ್ಯವಂಶಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ವಿಕಲಚೇತನರಿಗಾಗಿ ಮೀಸಲಾದ ಶೇ.5ರಷ್ಟು ಅನುದಾನ ಬಳಕೆ, ಮತ್ತು ವಿವಿಧ ಯೋಜನೆಗಳಡಿ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಸೌಲಭ್ಯಗಳ ಮೂಲಕ ವಿಕಲಚೇತನ ಓರ್ವ ವ್ಯಕ್ತಿಗೂ ನೆರವಾದರೂ ಜೀವನ ಸಾರ್ಥಕವಾಗಲಿದೆ. ಈ ದಿಸೆಯಲ್ಲಿ ಸರ್ಕಾರವು ಶಿಕ್ಷಣ, ಉದ್ಯೋಗ ಹಾಗೂ ಅನುದಾನದಲ್ಲಿ ನ್ಯಾಯ ಬದ್ಧವಾಗಿ ಮೀಸಲಿಟ್ಟ ಅನುದಾನದಲ್ಲಿ ವಿಕಲಚೇತನರಿಗೆ ಅವಶ್ಯಕ ಸೌಲಭ್ಯಗಳನ್ನು ಕಡ್ಡಾಯವಾಗಿ ತಲುಪಿಸುವಂತೆ ಅವರು ಸೂಚನೆ ನೀಡಿದರು.
ವಿಕಲಚೇತನರ ಜೀವನದಲ್ಲಿ ಆರೋಗ್ಯ ಮತ್ತು ಶಿಕ್ಷಣ ಪ್ರಮುಖ ಪಾತ್ರ ವಹಿಸಲಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಶಾಲಾ ವ್ಯಾಪ್ತಿಯಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗೆ ಬ್ರೈಲ್ ಲಿಪಿ, ಕಿವುಡರಿಗೆ ಸೈನ್ ಭಾಷೆ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ವಿಶೇಷ ಶಿಬಿರ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ಕುರಿತು ಕ್ರಿಯಾಯೋಜನೆ ರೂಪಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸಲ್ಲಿಸಬೇಕು ಎಂದು ತಿಳಿಸಿದರು.
ಉದ್ಯೋಗ ಮತ್ತು ವಿನಿಮಯ ಕಚೇರಿ ಮೂಲಕ ಸೂಕ್ತ ಉದ್ಯೋಗಾವಕಾಶ ಕಲ್ಪಿಸಬೇಕು. ಕೃಷಿ, ಮೀನುಗಾರಿಕೆ, ಪಶು ಸಂಗೋಪನೆ, ವಿವಿಧ ನಿಗಮಗಳ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿಕಲಚೇತನರಿಗೆ ದೊರೆಯಬಹುದಾದ ಸೌಲಭ್ಯಗಳನ್ನು ಆದ್ಯತೆ ಮೇಲೆ ಕಲ್ಪಿಸಬೇಕು. ಶೇ5 ರಷ್ಟು ಅನುದಾನ ತಪ್ಪದೇ ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ವ್ಯಾಪ್ತಿಯಲ್ಲಿ ವಿಕಲಚೇತನರ ಸ್ನೇಹಿ ಸೌಲಭ್ಯಗಳನ್ನು ವಿಶೇಷವಾಗಿ ರ್ಯಾಂಪ್, ಶೌಚಾಲಯ ಇನ್ನಿತರ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ವಿಕಲಚೇತನರು ಸೌಲಭ್ಯ ಪಡೆಯುವವರೆಗೆ ಕಾಯದೆ ಅವರ ಮನೆ ಬಾಗಿಲಿಗೆ ಸೌಲಭ್ಯ ಕಲ್ಪಿಸಬೇಕು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ತಕ್ಷಣ ಸೌಲಭ್ಯಗಳನ್ನು ಕಲ್ಪಿಸಲು ಅವರು ಸೂಚನೆ ನೀಡಿದರು.
ವಿಕಲಚೇತನರಿಗೆ ಸಕಾಲಕ್ಕೆ ಮಾಹೆವಾರು ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ವಿಶೇಷ ನ್ಯಾಯಾಧೀಶರ ಮೂಲಕ ಅವರು ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶವಿದೆ. ವಿವಿಧ ಬ್ಯಾಂಕ್ ಗಳ ಮೂಲಕ ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲವೀಶ್ ಒರಡಿಯಾ ಅವರು ಮಾತನಾಡಿ, ಪ್ರತಿ ಇಲಾಖೆ ವ್ಯಾಪ್ತಿಯ ವಿಕಲಚೇತನರಿಗೆ ಇರುವ ಶೇ.5ರ ಅನುದಾನ ಸಮರ್ಪಕವಾಗಿ ಬಳಸಬೇಕು. ಬ್ರೈಲ್ ಭಾಷಾ, ಸೈನ್ ಭಾಷೆ ತರಬೇತಿ ಹಮ್ಮಿಕೊಳ್ಳಬೇಕು. ವಿಕಲಚೇತನರ ಭವಿಷ್ಯದ ಹಿತದೃಷ್ಟಿಯಿಂದ ಅವರಿಗೆ ಸೌಲಭ್ಯ ಕಲ್ಪಿಸಲು ಸೂಚಿಸಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳಾದ ಶರಣಗೌಡ ಪಾಟೀಲ್ ಅವರು ಮಾತನಾಡಿ ಜಿಲ್ಲೆಯಲ್ಲಿ ಮಹಿಳೆಯರು(10568),( ಪುರುಷರು-16855), ಲಿಂಗತ್ವ ಅಲ್ಪಸಂಖ್ಯಾತರು(4) ಒಳಗೊಂಡು ಒಟ್ಟು 27,427 ವಿಕಲಚೇತನರು ಇದ್ದಾರೆ.
2016ರ ವಿಕಲಚೇತನರ ಹಕ್ಕುಗಳ ಕಾಯ್ದೆ ಯಡಿ 21ವಿದಧ ಅಂಗವಿಕಲತೆಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. 23,272 ವಿಕಲತೆ ಪ್ರಮಾಣ ಪತ್ರ ನೀಡಲಾಗಿದೆ. 31,334 ಅಂಗವಿಕಲ ಪೋಷಣಾ ಪಿಂಚಣಿ ನೀಡಲಾಗುತ್ತಿದ್ದು, ಆರೋಗ್ಯ ವಿಮೆ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.