ಯಾದಗಿರಿ | ಸರ್ವವ್ಯಾಪಿ, ಸರ್ವ ಸ್ಪರ್ಶಿ ಯೋಜನೆಯ ಬಜೆಟ್ : ಬಸವರಾಜಪ್ಪ ವಿಭೂತಿಹಳ್ಳಿ.
ಯಾದಗಿರಿ : ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿರುವ ಬಜೆಟ್ ಭಾರತದ ವಿಕಾಸ ಮತ್ತು ಅಭಿವೃದ್ಧಿ ಪಥದೆಡೆಗೆ ತೆಗೆದುಕೊಂಡು ಹೋಗುವ ವಿಕಸಿತ ಬಜೆಟ್ ಆಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ ಹೇಳಿದರು.
ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಮ ವರ್ಗದವರಿಗೆ 12 ಲಕ್ಷ ರೂ. ವರೆಗಿನ ಆದಾಯಕ್ಕೆ ಶೂನ್ಯ ತೆರಿಗೆ, ವಿಶ್ವದ 3ನೇ ಆರ್ಥಿಕ ಶಕ್ತಿಯಾಗಿ ಹೊಂದಲು 10 ಲಕ್ಷ ಕೋಟಿ ರೂ. ಹೆಚ್ಚು ಬಂಡವಾಳ ಹೂಡಿಕೆ, ರೈತ, ಮಹಿಳೆ,ಯುವಕರಿಗೆ ಹೆಚ್ಚಿನ ಆದ್ಯತೆ, ಐದು ವರ್ಷಗಳಲ್ಲಿ ಹತ್ತಿ ಕೃಷಿಗೆ ವಿಶೇಷ ಉತ್ತೇಜನ, ಮೀನುಗಾರರ ವಲಯಕ್ಕೆ 60 ಕೋಟಿ ರೂ. ಅನುದಾನ ಹೀಗೆ ಈ ಬಜೆಟ್ ಜನಪರವಾಗಿದೆ ಎಂದು ಹೇಳಿದರು.
ಕಿಸಾನ ಕ್ರೆಡಿಟ್ ಕಾರ್ಡ್ ಮೂಲಕ ಸಾಲದ ಮೊತ್ತ 3ರಿಂದ 5 ಲಕ್ಷ ರೂ. ಗೆ ಏರಿಕೆಯಿಂದ ಸುಮಾರು ಎಂಟು ಕೋಟಿ ರೈತರಿಗೆ ಅನುಕೂಲವಾಗಲಿದೆ. ಒಟ್ಟು ಬಜೆಟ್ ನ ಶೇ.20 ರಷ್ಟು ಮೊತ್ತವನ್ನು ಬಂಡವಾಳ ಹೂಡಿಕೆಗೆ ಬಳಸಲಾಗುತ್ತಿದೆ, ಹೆಚ್ಚುವರಿ 36 ಜೀವ ರಕ್ಷಕ ಔಷಧಿಗಳ ಮೇಲಿನ ಆಮದು ಸುಂಕ ರದ್ದು ಮಾಡಿ ಬಡವರಿಗೆ ಅನುಕೂಲ ಮಾಡಲಾಗಿದೆ, ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವು ಇಳಿಕೆ ಮಾಡುವ ಮೂಲಕ ಸಣ್ಣ, ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗಿದೆ ಎಂದು ವಿಭೂತಿಹಳ್ಳಿ ವಿವರಿಸಿದರು.
ಎಂಎಸ್ ಎಂಇ ಮುಖಾಂತರ 7.5 ಕೋಟಿ ಯುವಕರಿಗೆ ಹೊಸ ಉದ್ಯೋಗ ಸೃಷ್ಟಿ ಮತ್ತು ಶೇ.36ರಷ್ಟು ಉತ್ಪಾದನೆ ಹೆಚ್ಚಿಸಲಿಕ್ಕೆ ಅನುವು ಮಾಡಿಕೊಟ್ಟಿದೆ. ಭಾರತದ ನೆಟ್ ಯೋಜನೆಯಡಿ ಎಲ್ಲ ಸರ್ಕಾರಿ ಪ್ರೌಢ ಶಾಲೆಗಳಿಗೆ ಉಚಿತ ಇಂಟರನೆಟ್ ಸೌಲಭ್ಯ ನೀಡಲಾಗಿದೆ. 12 ಲಕ್ಷಕ್ಕೆ ತೆರಿಗೆ ಮುಕ್ತ, 16 ಲಕ್ಷ ರೂ. ಗೆ ಶೇ.20 ರಷ್ಟು ಹಾಗೂ 25 ಲಕ್ಷ ರೂ.ಗೆ ಶೇ. 30ರಷ್ಟು ತೆರಿಗೆ ವಿಧಿಸುವ ಮೂಲಕ ಭಾರಿ ಅನುಕೂಲ ಮಾಡಿಕೊಟ್ಟಿದೆ ಎಂದು ಅವರು ವಿವರಿಸಿದರು.
ರಾಜ್ಯ ಕಾರ್ಯದರ್ಶಿ ಮತ್ತು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ, ರಾಚಣ್ಣಗೌಡ ಮುದ್ನಾಳ, ದೆವಿಂದ್ರನಾಥ ನಾದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮತ್ತು ಪರುಶುರಾಮ ಕುರಕುಂದಿ, ಜಿಲ್ಲಾ ವಕ್ತಾರ ಹಾಗೂ ನಗರಸಭೆ ಸದಸ್ಯ ಹಣಮಂತ ಇಟಗಿ, ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಸುದ್ದಿಗೋಷ್ಠಿಯಲ್ಲಿ ಇದ್ದರು.