ಯಾದಗಿರಿ : ಜಿಲ್ಲೆಯಲ್ಲಿ ಅನಧಿಕೃತವಾಗಿ ಆಸ್ಪತ್ರೆ ನಡೆಸುತ್ತಿರುವ ನಕಲಿ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿ, ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಪಿಸಿಪಿಎನ್‌ಡಿಟಿ, ಎಂಟಿಪಿ ಹಾಗೂ ಕೋಟ್ಪ (ತಂಬಾಕು ನಿಯಂತ್ರಣ) ಕುರಿತ ಸಭೆ ನಡೆಸಿದ ಅವರು, ನೊಂದಣಿ ಇಲ್ಲದೆ ಮತ್ತು ನಿಗದಿತ ವಿದ್ಯಾರ್ಹತೆ ಇಲ್ಲದೆ ಆಸ್ಪತ್ರೆ ನಡೆಸುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕೆಪಿಎಂಇ ಕಾಯ್ದೆಯಡಿ ಎಲ್ಲಾ ಆಸ್ಪತ್ರೆಗಳು ಕಡ್ಡಾಯವಾಗಿ ನೋಂದಣಿಯಾಗಿರಬೇಕು. ನಕಲಿ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ ಮುಂದಿನ ಕಾನೂನು ಕ್ರಮ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆಯ ಕಾರ್ಯವೈಖರಿಯ ಮೇಲೆ ತೀವ್ರ ನಿಗಾ ಇಡಲಾಗುವುದು ಎಂದರು.

ಅಧಿಕಾರಿಗಳು ಹಾಗೂ ವೈದ್ಯರು ಪರಸ್ಪರ ಸಮನ್ವಯದಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಲೋಪಗಳನ್ನು ಸರಿಪಡಿಸಿಕೊಂಡು ಸೇವೆಯಲ್ಲಿ ಸುಧಾರಣೆ ತರಬೇಕು ಎಂದು ತಿಳಿಸಿದರು.

ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ (PCPNDT) ಉಲ್ಲಂಘನೆಯಾಗದಂತೆ ಅಲ್ಟ್ರಾಸೋನೋಗ್ರಾಫಿ ಕೇಂದ್ರಗಳ ಮೇಲೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಸ್ತ್ರೀರೋಗ ತಜ್ಞರು ಮತ್ತು ರೇಡಿಯಾಲಜಿಸ್ಟ್‌ಗಳಿಗೆ ಪಿಸಿಪಿಎನ್‌ಡಿಟಿ ಕಾಯ್ದೆ ಹಾಗೂ ಅದರ ತಿದ್ದುಪಡಿಗಳ ಕುರಿತು ತರಬೇತಿ ಕಾರ್ಯಾಗಾರ ಆಯೋಜಿಸಬೇಕು. ಜಿಲ್ಲೆಯ ಲಿಂಗಾನುಪಾತದಲ್ಲಿ ವ್ಯತ್ಯಾಸ ಉಂಟಾಗಿರುವ ಕಾರಣಗಳನ್ನು ಪರಿಶೀಲಿಸುವ ಜೊತೆಗೆ ಯಾದಗಿರಿ, ವಡಗೇರಾ ಹಾಗೂ ಶೋರಾಪುರ ತಾಲೂಕುಗಳಲ್ಲಿ ವಿಶೇಷ ನಿಗಾ ವಹಿಸಲು ಸೂಚಿಸಿದರು.

ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ವೈದ್ಯಕೀಯ ಗರ್ಭಪಾತ ಮಾತ್ರೆಗಳನ್ನು ಮಾರಾಟ ಮಾಡುತ್ತಿರುವ ಔಷಧ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಔಷಧ ಮಾರಾಟ ಮಳಿಗೆಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆ, ತಾಲೂಕು ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕೋಟ್ಪ ಕಾಯ್ದೆ-2003ರ ಅನ್ವಯ ಕ್ರಮ ಕೈಗೊಳ್ಳಬೇಕು. ಪರವಾನಗಿ ಪಡೆಯದ ಅಂಗಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಶಾಲೆಗಳ 100 ಮೀಟರ್ ವ್ಯಾಪ್ತಿಯೊಳಗಿನ ತಂಬಾಕು ಮಾರಾಟಗಾರರ ಪರವಾನಗಿಯನ್ನು ರದ್ದುಗೊಳಿಸುವಂತೆ ಸೂಚಿಸಿದರು.

ಶಾಲೆ ಮತ್ತು ಕಾಲೇಜುಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿ ರೂಪಿಸಲು ನಗರಸಭೆ, ಕೆಕೆಆರ್‌ಟಿಸಿ, ಪೊಲೀಸ್, ಬಾಲಕಾರ್ಮಿಕ ಹಾಗೂ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲೆಯಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, 1,241 ತಂಬಾಕು ಮುಕ್ತ ಶಾಲೆಗಳು ಹಾಗೂ 68 ತಂಬಾಕು ಮುಕ್ತ ಕಾಲೇಜುಗಳನ್ನು ಘೋಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಧರಣೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರಾದಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಎಮ್.ಎಸ್. ಪಾಟೀಲ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಜ್ಯೋತಿ ಕಟ್ಟಿಮನಿ, ಹಾಗೂ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor