ಯಾದಗಿರಿ | ಪುರಾತನ ಕಾಲದಿಂದ ಪ್ರಸ್ತುತವರೆಗೂ ಹೆಣ್ಣುಮಕ್ಕಳ ಸಾಧನೆ ಅಪಾರವಾಗಿದೆ : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್
ಯಾದಗಿರಿ : ಪುರಾತನ ಕಾಲದಿಂದ ಪ್ರಸ್ತುತವರೆಗೂ ಹೆಣ್ಣುಮಕ್ಕಳ ಸಾಧನೆ ಅಪಾರವಾಗಿದೆ. ಹೆಣ್ಣುಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲಿ ಮುಂದುವರಿಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಹೆಣ್ಣು ಅಬಲೆ ಅಲ್ಲ, ಸಬಲೆಯಾಗಿದ್ದಾಳೆ ಎಂದು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ ಜಿಲ್ಲಾ ಘಟಕ ಯಾದಗಿರಿ ನೂತನ ಜಿಲ್ಲಾ ಘಟಕದ ಉದ್ಘಾಟನೆ, ಪದಗ್ರಹಣ ಹಾಗೂ ಪರಿಸರ ಜಾಗೃತಿ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣುಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಹೆಣ್ಣು ದೇವರ ರೂಪವಾಗಿದ್ದಾಳೆ. ಹಳ್ಳಿಮನೆಯಲ್ಲಿ ಸೌದೆ ಉರಿಯುವಿಕೆಯಿಂದ ಹಿಡಿದು ಕಚೇರಿಯಲ್ಲಿ ಪೆನ್ನು ಹಿಡಿಯುವಿಕೆವರೆಗೂ ಒಂದು ಹೆಜ್ಜೆ ಮುಂದೆ ಇದ್ದಾಳೆ ಎಂದರು.
ಜಿಲ್ಲಾಧಿಕಾರಿ ಡಾ. ಸುಶೀಲಾ. ಬಿ ಮಾತನಾಡಿ , ನಾಡು ಉಳಿಯುವಿಕೆಗಾಗಿ ಪ್ರತಿಯೊಬ್ಬರೂ ಗಿಡ ಮರಗಳನ್ನು ಪಾಲನೆ ಪೋಷಣೆ ಮಾಡಬೇಕು. ಪ್ರತಿ ಮನೆ ಮನೆಗೆ, ಸಸಿಗಳನ್ನು ನೆಟ್ಟು ಪರಿಸರ ಬೆಳೆಸುವುದರ ಜೊತೆ ಜೊತೆಗೆ ಮಹಿಳೆಯರಾದ ನಾವು ನಮ್ಮ ನಮ್ಮ ರಕ್ಷಣೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಶೈಲಜಾ ಸಿ.ವಿ., ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಯಪ್ಪಗೌಡ ಹುಡೇದ್, ಉಪ ಪ್ರಾಂಶುಪಾಲೆ ಆರತಿ ಕಡಗಂಚಿ, ಜಿಲ್ಲಾಧ್ಯಕ್ಷೆ ಚಂದ್ರಕಲಾ ಗೂಗಲ್, ಸಂಘದ ಕಾರ್ಯದರ್ಶಿಗಳು, ಸದಸ್ಯರು ಸೇರಿದಂತೆ ಅನೇಕ ಮಹಿಳೆಯರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಜ್ಯೋತಿಲತಾ ನಿರೂಪಿಸಿದರು, ಡಾ.ಭಾಗ್ಯವತಿ ಅಮರೇಶ್ವರ ವಂದಿಸಿದರು.