ಯಾದಗಿರಿ | ರಾಜ್ಯ ಬಜೆಟ್ ವಿರೋಧಿಸಿ ಪೌರ ಕಾರ್ಮಿಕರ ಪ್ರತಿಭಟನೆ
ಸುರಪುರ : ಚುನಾವಣೆ ಪೂರ್ವದಲ್ಲಿ ರಾಜ್ಯದಲ್ಲಿನ ಸ್ಥಳಿಯ ಸಂಸ್ಥೆಗಳಲ್ಲಿನ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸುವುದಾಗಿ ತಿಳಿಸಿ ಈಗ ಬಜೆಟ್‌ನಲ್ಲಿ ನೇರ ಪಾವತಿಗೊಳಪಡಿಸದೆ ಸರಕಾರ ಹೊರಗುತ್ತಿಗೆ ನೌಕರರಿಗೆ ಅನ್ಯಾಯ ಮಾಡಿದೆ ಎಂದು ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಗದೀಶ ಶಾಖಾನವರ್ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯಿಂದ ನಗರದ ನಗರಸಭೆ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಹೊರಗುತ್ತಿವೆ ಪೌರ ಕಾರ್ಮಿಕರನ್ನು ಖಾಯಂ ಮಾಡುವುದರ ಕುರಿತು ಕಾಂಗ್ರೆಸ್ ಸರಕಾರ 6ನೇ ಗ್ಯಾರಂಟಿ ಎಂದು ತಿಳಿಸಿತ್ತು, ಆದರೆ ಚುನಾವಣೆಯಲ್ಲಿ ಗೆದ್ದು ಸರಕಾರ ರಚನೆಯಾದ ನಂತರ ಕೊಟ್ಟ ಮಾತನ್ನು ಮರೆತಿದ್ದಾರೆ. ಹೊರಗುತ್ತಿಗೆ ನೌಕರರ ನಿರಂತರ ತೀವ್ರವಾದ ಹೋರಾಟದ ಪರಿಣಾಮವಾಗಿ ಈ ಬಾರಿಯ ಬಜೆಟ್‌ನಲ್ಲಿ ನೇರ ಪಾವತಿ ಘೋಷಣೆಗೆ ಅಗತ್ಯ ಪ್ರಸ್ತಾವನೆ ಸಲ್ಲಿಸಲು ಹಣಕಾಸು ಇಲಾಖೆ ಸೂಚನೆ ನೀಡಿತ್ತು, ಅದರಂತೆ ನಗರಾಭಿವೃಧ್ಧಿ ಇಲಾಖೆ ಅಗತ್ಯ ಪ್ರಸ್ತಾವನೆ ಸಲ್ಲಿಸಿದ್ದರು ಗುತ್ತಿಗೆ ಏಜೆನ್ಸಿಗಳ ಲಾಭಿಗೆ ಶರಣಾಗಿರುವ ರಾಜ್ಯ ಸರಕಾರ ಹೊಸಗುತ್ತಿಗೆ ನೌಕರರಿಗೆ ವಿಶ್ವಾಸದ್ರೋಹ ಎಸಗಿದೆ. ರಾಜ್ಯ ಸರಕಾರ ಕೂಡಲೇ ಗುತ್ತಿಗೆ ಪದ್ಧತಿ ರದ್ಧುಗೊಳಿಸಿ ನೇರಪಾವತಿ ಜಾರಿಗೊಳಿಸಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಕುಡಿಯುವ ನೀರು ಸರಬರಾಜು, ಸ್ವಚ್ಛತೆ ಬಹಿಷ್ಕರಿಸಿ ಅನಿರ್ದಿಷ್ಠಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಅಯ್ಯಣ್ಣ ಪೂಜಾರಿ,ಉಪಾಧ್ಯಕ್ಷ ಸತೀಶ ನಾಯಕ, ಮುಖಂಡರಾದ ಶರಣಬಸವ ಮಲ್ಲಿಬಾವಿ, ವೆಂಕಟೇಶ ಪೂಜಾರಿ, ಗೋಪಾಲ ಸತ್ಯಂಪೇಟೆ, ಅನೀಪ್ ಗುಡಗುಂಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.