ಯಾದಗಿರಿ | ಸಮಾಜ ಸುಧಾರಣೆಗೆ ಪುರಾಣ ಪ್ರವಚನಗಳು ಮುಖ್ಯ : ಶಾಸಕ ಆರ್.ವಿ.ನಾಯಕ
ಸುರಪುರ : ಸಮಾಜ ಸುಧಾರಣೆಯಾಗಬೇಕಾದರೆ ಪುರಾಣ ಪ್ರವಚನಗಳು ಮುಖ್ಯವಾಗಿದೆ. ಅಂತಹ ಪುರಾಣ ಪ್ರವಚನ ಕಡ್ಲೆಪ್ಪನವರ ನಿಷ್ಠಿ ವಿರಕ್ತ ಮಠದಲ್ಲಿ ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಮಾತನಾಡಿದರು.
ನಗರದ ಕಬಾಡಗೇರಾದಲ್ಲಿನ ಕಡ್ಲೆಪ್ಪನವರ ನಿಷ್ಠಿ ವಿರಕ್ತ ಮಠದ ಆವರಣದಲ್ಲಿ ಮಲ್ಲಿಕಾರ್ಜುನ ಮಹಾಸ್ವಾಮಿಗಳ 49ನೇ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ 9 ದಿನಗಳ ಶರಣರ ಚರಿತಾಮೃತ ಪುರಾಣ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶ್ರೀ ಮಠದ ಜಿರ್ಣೋದ್ಧಾರಕ್ಕೆ ನಾನು ಮತ್ತು ನಮ್ಮ ಸರಕಾರದಿಂದ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಹಕಾರ ಕೊಡಿಸುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮಠದ ಪೂಜ್ಯರಾದ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿ ಮಾತನಾಡಿ, ಪುರಾಣ ಪ್ರವಚನ ಆಲಿಸುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ, ತಾವೆಲ್ಲರು ಅನೇಕ ವರ್ಷಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೀರಿ ತಾವು ಶರಣರ ಜೀವನ ಸಂದೇಶ ಬದುಕಿನಲ್ಲಿ ಅಳವಡಿಸಿಕೊಂಡು ಪಾವನಾರುಗವಂತೆ ತಿಳಿಸಿದರು.
ಶರಣರ ವಚನಗಳಿಂದ ಎಲ್ಲರ ಬದುಕು ಹಸನಾಗಲಿದೆ. ಆದರೆ ನಾವೆಲ್ಲರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶರಣರ ಚರಿತಾಮೃತ ಇಲ್ಲಿಯೇ ಕೇಳಿ ಇಲ್ಲಿಯೇ ಬಿಟ್ಟು ಹೋಗುವ ಬದಲು ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಮಕ್ಕಳಿಗೆ ಶರಣರ ಸಂದೇಶ ಮತ್ತು ಸಂಸ್ಕಾರವನ್ನು ಕಲಿಸಬೇಕು ಎಂದರು.
ಕಳೆದ 25 ವರ್ಷಗಳಿಂದ ತಾಲೂಕಿನ ವೀರಶೈವ ಲಿಂಗಾಯತ ಸಮುದಾಯ ಸೇವೆ ಮಾಡಲು ಹಾಗೂ 15 ವರ್ಷಗಳಿಂದ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷನಾಗಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ತಾಲೂಕಿನ ಸಮಾಜದ ಎಲ್ಲ ಹಿರಿಯರಿಗೆ ಹಾಗೂ ಜನತೆಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಗಜೇಂದ್ರಗಡ ಕಾಲಜ್ಞಾನ ಮಠದ ಶ್ರೀ ಶರಣಬಸವೇಶ್ವರ ಸ್ವಾಮೀಜಿ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಮುಖಂಡರಾದ ಬಸವರಾಜಪ್ಪ ನಿಷ್ಠಿ ದೇಶಮುಖ ಉಪಸ್ಥಿತರಿದ್ದರು. ಗವಾಯಿಗಳಾದ ದೊಡ್ಡಬಸಯ್ಯ ಹಿರೇಸಿಂಗನಗುತ್ತಿ, ಸಂಗೀತಗಾರ ಬೂದಯ್ಯಸ್ವಾಮಿ, ತಬಲಾ ವಾದಕ ಶಿವಕುಮಾರ ಕಟ್ಟಿಸಂಗಾವಿ ಸೇರಿದಂತೆ ಕಾರ್ಯಕ್ರಮದ ಯಶಸ್ಸಿಗೆ ಸೇವೆ ಮಾಡಿದ ಎಲ್ಲರಿಗೆ ಸನ್ಮಾನಿಸಿ ಗೌರವಿಸಲಾಯಿತು.
ನಂತರ ರಾತ್ರಿಯಿಡೀ ಸಂಗೀತ ದರ್ಬಾರ ಕಾರ್ಯಕ್ರಮ ಜರುಗಿತು. ಶ್ರೀಮಠದ ನೂರಾರು ಭಕ್ತರು ಭಾಗವಹಿಸಿದ್ದರು. ಶರಣಬಸಪ್ಪ ಯಾಳವಾರ, ಹೆಚ್.ರಾಠೋಡ ನಿರೂಪಿಸಿದರು, ರಾಜಶೇಖರ ದೇಸಾಯಿ ಸ್ವಾಗತಿಸಿದರು, ಶ್ರೀಶೈಲ ಯಂಕಂಚಿ ವಂದಿಸಿದರು.