×
Ad

ಯಾದಗಿರಿ | ಪ.ಜಾ, ಪ.ಪಂ ಅಲೆಮಾರಿ ಜನಾಂಗಕ್ಕೆ ಸರ್ಕಾರದ ವಿವಿಧ ಯೋಜನೆಗಳ ಲಾಭ ದೊರಕಿಸಿ ; ನಿಗಮದ ಅಧ್ಯಕ್ಷೆ ಪಲ್ಲವಿ.ಜಿ

Update: 2025-03-10 18:32 IST

ಯಾದಗಿರಿ : ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಹಾಗೂ ಸ್ವಾವಲಂಬಿ ಸಾರಥಿ ಯೋಜನೆಗಳಡಿ ಹೆಚ್ಚಿನ ಗುರಿ ನೀಡಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಈ ಸೌಲಭ್ಯಗಳ ಲಾಭ ದೊರೆಯುವಂತೆ ನೋಡಿಕೊಳ್ಳಲು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಜನಾಂಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಪಲ್ಲವಿ ಜಿ. ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಸಮುದಾಯದ ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರಿಂದ ಕುಂದುಕೊರತೆ ಅಹವಾಲು ಸ್ವೀಕಾರ ಹಾಗೂ ಸಭೆ ಮತ್ತು ಅಧಿಕಾರಿಗಳೊಂದಿಗೆ ನಿಗಮದ ವಿವಿಧ ಯೋಜನೆಗಳಡಿ ಕಲ್ಪಿಸಿದ ಸೌಲಭ್ಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಅತ್ಯಂತ ಕಡುಬಡವ ಹಾಗೂ ಹಿಂದುಳಿದ ಸಮುದಾಯ ಈ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಜನಾಂಗವಾಗಿದೆ. ಈ ಹಿನ್ನೆಲೆಯಲ್ಲಿ ಈ ಸಮುದಾಯದ ಜನರಿಗೆ ಆದ್ಯತೆ ಮೇಲೆ ಸರ್ಕಾರದ ವಿವಿಧ ಸೌಲಭ್ಯಗಳ ಲಾಭವನ್ನು ದೊರಕಿಸಿಕೊಡಬೇಕು. ತಾಲೂಕುವಾರು ನಿವೇಶನ ರಹಿತರಿಗೆ ಹಾಗೂ ಮನೆರಹಿತರಿಗೆ ವಸತಿ ಮತ್ತು ನಿವೇಶನದ ಸೌಲಭ್ಯ ಕಲ್ಪಿಸುವಂತೆ ಅವರು ಸೂಚನೆ ನೀಡಿದರು.

ಅಧಿಕಾರಿಗಳು ಮತ್ತು ನಾಮ ನಿರ್ದೇಶಿತ ಸದಸ್ಯರ ಮಧ್ಯ ಸಮನ್ವಯತೆ ಇರಬೇಕು. ಈ ಸಮುದಾಯಕ್ಕೆ ಸರ್ಕಾರದ ಯೋಜನೆಗಳಡಿ ಸೌಲಭ್ಯಗಳು ದೊರಕಿಸಬೇಕು ಎಂಬ ಉದ್ದೇಶದೊಂದಿಗೆ ಜಿಲ್ಲಾ ಮಟ್ಟದಲ್ಲಿ ಜಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅನುಷ್ಠಾನ ಸಮಿತಿ ಇದ್ದು, ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಸಭೆ ನಡೆಸಿ ಯೋಜನೆಗಳ ಲಾಭ ದೊರಕಿಸಲು ಮತ್ತು ಅರ್ಹ ಫಲಾನುಭವಿಗಳ ಆಯ್ಕೆಗೆ ನೆರವಾಗುವಂತೆ ಅವರು ಸಲಹೆ ನೀಡಿದರು.

ಈ ಸಮುದಾಯದ ಹಿತೈಷಿಯಾಗಿ ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಇಲ್ಲಿ ಅಹವಾಲು ಸ್ವೀಕರಿಸಲಾಗುತ್ತಿದೆ. ತಾವೂ ಸಹ ಅತ್ಯಂತ ಹಿಂದುಳಿದ ಮಾತೃ ಪ್ರಧಾನ ಸಮುದಾಯದ ಹೆಣ್ಣು ಮಗಳಾಗಿ ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರ ಆಶೀರ್ವಾದದಿಂದ ಈ ನಿಗಮದ ಪ್ರಪ್ರಥಮ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುವ ಅವಕಾಶ ಲಭಿಸಿದೆ. ಈಗಾಗಲೇ 20 ಜಿಲ್ಲೆಗಳಲ್ಲಿ ಈ ರೀತಿಯ ಕುಂದು ಕೊರತೆ ಹವಾಲುಗಳನ್ನು ಸ್ವೀಕರಿಸಿ ಯಾದಗಿರಿಯಲ್ಲಿಯೂ ಕೂಡ ಸ್ವೀಕರಿಸಿದ್ದು, ಸರ್ಕಾರದ ಗಮನಕ್ಕೆ ತರುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.

ಈ ಸಮುದಾಯಕ್ಕೆ ಸಮರ್ಪಕ ಸೌಲಭ್ಯ ದೊರೆಯಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಜಾತಿ ಸೇರಿದಂತೆ ಇನ್ನಿತರ ದಾಖಲಾತಿಗಳನ್ವಯ, ಸರ್ಕಾರದ ಮಾರ್ಗಸೂಚಿ ಗಳನ್ವಯ ಅವಶ್ಯಕ ಸೌಲಭ್ಯ ಪೂರೈಕೆ ಕುರಿತು ಅಧಿಕಾರಿಗಳಿಗೆ ಕಾರ್ಯಾಗಾರ ಏರ್ಪಡಿಸಬೇಕು. ನಿಗಮದ ಯೋಜನೆಗಳ ಬಗ್ಗೆ ಅರಿವುಗೆ ಇಲಾಖೆ ವ್ಯಾಪ್ತಿಯಲ್ಲಿ ಮಾಹಿತಿ ಅಳವಡಿಸಬೇಕು ಎಂದು ಸೂಚಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಜನಾಂಗದ ಮಕ್ಕಳು ಮುಖ್ಯ ವಾಹಿನಿಗೆ ಬರಬೇಕು. ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯ ವಿವಿಧ 20 ವಸತಿ ಶಾಲೆ ಹಾಗೂ ಒಂದು ಕಾಲೇಜುದಲ್ಲಿ ಈ ಜನಾಂಗಕ್ಕಾಗಿ ಶೇ.10ರಷ್ಟು ಮೀಸಲಿರುವ ಸ್ಥಾನಗಳ ಪೈಕಿ ಕೇವಲ ಶೇ.48 ರಷ್ಟು ಮಾತ್ರ ಪ್ರವೇಶಾತಿ ಪಡೆದಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಗುರಿಗೆ ತಕ್ಕಂತೆ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುವ ನಿಟ್ಟಿನಲ್ಲಿ ಸಜ್ಜುಗೊಳಿಸುವಂತೆ ಸಮುದಾಯಕ್ಕೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕ ಕುಂದು ಕೊರತೆ ಅಹವಾಲು ಸ್ವೀಕಾರ :

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಲೆಮಾರಿ ಜನಾಂಗದ ವಿವಿಧ ಸಂಘ ಸಂಸ್ಥೆಗಳಿಂದ ಹಾಗೂ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಸೂಕ್ತ  ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಮೂಲ ಜನಾಂಗದವರಿಗೆ ನೈಜ ಜಾತಿ ಪ್ರಮಾಣ ಪತ್ರ, ವಸತಿ ರಹಿತರಿಗೆ ವಸತಿ ಸೌಲಭ್ಯ, ನಿವೇಶನ ರಹಿತರಿಗೆ ನಿವೇಶನ ಸೌಲಭ್ಯ, ಸಮುದಾಯ ಭವನ ಶೌಚಾಲಯ ನಿರ್ಮಾಣ, ಸುಸಜ್ಜಿತ ಶಾಲಾ ಕಟ್ಟಡಗಳ ವ್ಯವಸ್ಥೆ, ಆಟದ ಮೈದಾನ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಇತ್ತೀಚೆಗೆ ಯಲಸತ್ತಿ ಗ್ರಾಮದಲ್ಲಿ ಮೇಲ್ವರ್ಗದ ಜನಾಂಗದಿಂದ ಈ ಬಡ ಸಮುದಾಯದ ಮೇಲೆ ನಡೆದ ದೌರ್ಜನ್ಯದ ತಪ್ಪಿತಸ್ಥರನ್ನು ವಿಶೇಷ ತನಿಖಾ ತಂಡ ರಚಿಸಿ ಶಿಕ್ಷೆಗೆ ಒಳಪಡಿಸಬೇಕು. ಗುರುಮಠಕಲ್ ತಾಲೂಕಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಇಬ್ಬರು ಚಿಂದಿ ಆಯುವ ಮಹಿಳೆಯರ ಸಾವಿನ ಕುರಿತು ಎಫ್.ಎಸ್.ಎಲ್ ವರದಿ ಆಧಾರದ ಮೇಲೆ ನ್ಯಾಯಯುತ ಕ್ರಮ ಕೈಗೊಳ್ಳಲು ಪೋಲಿಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಆನಂದಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಸೇರಿದಂತೆ ಸಮುದಾಯದವರು ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News