ಯಾದಗಿರಿ | ಜಿಲ್ಲೆಗೆ ಚೊಂಬು ನೀಡಿದ ದಾಖಲೆಯ ಬಜೆಟ್: ಕರವೇ ಜಿಲ್ಲಾಧ್ಯಕ್ಷ ಭೀಮುನಾಯಕ ಆರೋಪ
ಯಾದಗಿರಿ : ಅತಿ ಹಿಂದುಳಿದ ಜಿಲ್ಲೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿಯೂ ಹಿಂದುಳಿಸಿದ್ದಲ್ಲದೇ ಯಾದಗಿರಿಗೆ ಚೊಂಬು ಕೊಟ್ಟಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಅತ್ಯಂತ ಹಿಂದುಳಿದ ಜಿಲ್ಲೆಗಳ ಪೈಕಿಯೇ ಅತಿ ಹಿಂದುಳಿದ ಮಹತ್ವಾಕಾಂಕ್ಷಿ ಜಿಲ್ಲೆಗೆ ಅಗತ್ಯವಿರುವ ಬೇಡಿಕೆಗಳನ್ನು ಪರಿಗಣಿಸಿ ಈಡೇರಿಸಬೇಕಾದ ಸಿಎಂ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಪಾದಿಸಿದ್ದಾರೆ.
ಶೈಕ್ಷಣಿಕವಾಗಿ ಅತಿ ಹಿಂದುಳಿದಿರುವ ಜಿಲ್ಲೆಗೆ ಎಂಜಿನಿಯರಿಂಗ್ ಕಾಲೇಜು ಘೋಷಣೆಯಾಗುತ್ತದೆ ಎಂಬ ನಿರೀಕ್ಷೆ ಈ ಬಾರಿಯೂ ಹುಸಿಯಾಗಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಶಾಸಕರು, ಸಚಿವರು, ಸಂಸದರು ಜಿಲ್ಲೆಯ ಬೇಡಿಕೆಗಳನ್ನು ಸಮರ್ಥವಾಗಿ ಮಂಡಿಸದೇ ನಿರ್ಲಕ್ಷ್ಯವಹಿಸಿದ್ದಾರೆ.
ನೆರೆಯ ಜಿಲ್ಲೆಯ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಕೆಲಸ ಮಾಡಿಸಿಕೊಂಡಿದ್ದರೆ ಜಿಲ್ಲೆಯಲ್ಲಿನ ಮೂವರು ಆಡಳಿತಾರೂಢ ಪಕ್ಷದ ಶಾಸಕರೇ ಇದ್ದರೂ ನಿರ್ಲಕ್ಷ್ಯ ಮಾಡಿದ್ದಾರೆ, ಅತ್ತ ಸರ್ಕಾರ ಜಿಲ್ಲೆಗೆ ಮಲತಾಯಿ ಧೋರಣೆ ಅನುಸರಿಸಿ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ.
ಬಜೆಟ್ ನಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿದ ಕೆಲಸಗಳನ್ನು ಮತ್ತೆ ತೋರಿಸಿ ಸಾಧನೆ ಎಂಬಂತೆ ಬಿಂಬಿಸಿರುವುದು ಅತ್ಯಂತ ಕಳಪೆ ಬಜೆಟ್ ಎನ್ನಲು ಸಾಕ್ಷಿಯಾಗಿದೆ. ಕೆಕೆಆರ್‌ಡಿಬಿಯಿಂದ ಆರಂಭವಾಗಿರುವ ಕೆಲಸಗಳು, ಈಗಾಗಲೇ ತಿಂಗಳುಗಳ ಹಿಂದೆಯೇ ಉದ್ಘಾಟನೆ ಮಾಡಿ ಹೋಗಿರುವ ನರ್ಸಿಂಗ್ ಕಾಲೇಜು ಕೊಟ್ಟಂತೆ ಬಿಂಬಿಸಿರುವುದು ತೀರ ಬಾಲಿಷ ಸಂಗತಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.