ಯಾದಗಿರಿ | ರಾಜ್ಯ ಮಟ್ಟದ ರೈತ ಜಾಗೃತಿ ಸಮಾವೇಶ, ಸಾಧಕರಿಗೆ ಸನ್ಮಾನ
ಶಹಾಪುರ : ರೈತರು ವರ್ಷವಿಡಿ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಾರೆ. ಒಮ್ಮೆ ಬೆಳೆ ಕೈ ಕೊಟ್ಟರೂ ಮಗದೊಮ್ಮೆ ಭರವಸೆಯೊಂದಿಗೆ ಮತ್ತೆ ಹೊತ್ತಿ ಬಿತ್ತುವ ಕೆಲಸ ಮಾಡುತ್ತಾರೆ. ಅಂತಹ ರೈತರಿಗೆ ಅನ್ಯಾಯವಾದಾಗ ನಾವೆಲ್ಲ ಅವರ ಜತೆ ಕೈಜೋಡಿಸಿ ಅವರ ಹೋರಾಟದಲ್ಲಿ ಭಾಗವಹಿಸಬೇಕೆಂದು ಮುಗುಳಖೋಡ ಜಿಡಗಾ ಮಠದ ಡಾ.ಮುರುಘರಾಜೇಂದ್ರ ಮಹಾ ಸ್ವಾಮೀಜಿ ತಿಳಿಸಿದರು.
ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಮಿತಿ ಮತ್ತು ಯಾದಗಿರಿ ಜಿಲ್ಲಾ ಘಟಕದಿಂದ ರಾಜ್ಯ ಮಟ್ಟದ ರೈತ ಜಾಗೃತಿ ಸಮಾವೇಶ, ರೈತ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ದೇಶ ರಾಜ್ಯದಲ್ಲಿ ಸಾವಿರಾರು ಮಠಗಳಿವೆ. ಮಠಗಳಲ್ಲಿ ದಾಸೋಹ ನಡೆಯಬೇಕಾದರೆ ರೈತರು ದುಡಿದು ದವಸ ಧಾನ್ಯಗಳು ತಂದು ಕೊಟ್ಟಾಗಲೇ ದಾಸೋಹ ನಡೆಯುತ್ತದೆ. ಹೀಗಾಗಿ ಮಠಗಳು ರೈತರ ಪರವಾಗಿ ಅವರಿಗೆ ಅನ್ಯಾಯವಾದಾಗ ಸರ್ಕಾರಗಳ ವಿರುದ್ಧ ನಾವೆಲ್ಲ ಒಗ್ಗಟ್ಟಾಗಿ ರೈತರ ಬೆಂಬಲಕ್ಕೆ ನಿಲ್ಲಬೇಕಿದೆ. ರೈತರ ಸಂಘಟನಾತ್ಮಕ ಶಕ್ತಿ ದೊಡ್ಡದಿದೆ. ಆದರೆ ಪ್ರಾಮಾಣಿಕವಾಗಿ ರೈತರು ಸಂಘಟನೆ ಮಾಡುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕೆಂದು ಕರೆ ಕೊಟ್ಟರು.
ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಹುಲಿಜಂತಿ ಮಾಳಿಂಗರಾಯ ಮಹಾರಾಜರು ಆಶೀರ್ವಚನ ನೀಡಿದರು. ಸೊಂತದ ಬಾಲಯೋಗಿ ದತ್ತದಿಗಂಬರ ಶರಣ ಶಂಕರಲಿಂಗ ಮಹಾರಾಜರು, ಸೋಮೇಶ್ವರ ಮಹಾಸ್ವಾಮೀಜಿಗಳು, ಸದಾಶಿವ ಮಹಾರಾಜರು ಉಪಸ್ಥಿತರಿದ್ದರು.
ಹಸಿರು ಸೇನೆ ರಾಜ್ಯಧ್ಯಕ್ಷ ಚೂನಪ್ಪ ಪೂಜೇರಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ವರಿಷ್ಠ ಪಚ್ಚೆ ನಂಜುಂಡಸ್ವಾಮಿ ಮತ್ತು ಮಠಾಧೀಶರು ಸಾಮೂಹಿಕವಾಗಿ ಉದ್ಘಾಟಿಸಿದರು. ಸೇನೆಯ ರಾಜ್ಯ ಕಾರ್ಯಧ್ಯಕ್ಷ ಮಹೇಶಗೌಡ ಸುಬೇದಾರ, ಮಹೇಶ ಆನೇಗುಂದಿ, ಶಾಂತವೀರಪ್ಪಗೌಡ, ಚಂದನಗೌಡ ಮಾಲಿಪಾಟೀಲ್, ಶಶಿಧರ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು. ಬೆಳಗ್ಗೆ ಹೊಸ ಬಸ್ ನಿಲ್ದಾಣದಿಂದ ಆರಬೋಳ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ಜರುಗಿತು. ಆಗಮಿಸಿದ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.