ಯಾದಗಿರಿ | ಖಾಲಿ ಬಿಂದಿಗೆ ಹಿಡಿದು ಮಹಿಳೆಯರಿಂದ ನೀರಿಗಾಗಿ ಪ್ರತಿಭಟನೆ
ಯಾದಗಿರಿ : ತಾಲೂಕಿನ ಬಳಿಚಕ್ರ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಕುಡಿಯುವ ಖಾಲಿ ಬಿಂದಿಗೆ ಹಿಡಿದುಕೊಂಡು ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.
ದಿನನಿತ್ಯ ಜೀವನ ನಡೆಸಲು ತುಂಬಾ ಕಷ್ಟಕರವಾಗಿದೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಎಷ್ಟೋ ಬಾರಿ ಮನವಿ ಸಲ್ಲಿಸಿದರೂ, ಸಹಿತ ಪ್ರಯೋಜನವಾಗಲಿಲ್ಲ ಎಂದು ಮಹಿಳೆಯರು ತಿಳಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಬಸವರಾಜ್ ಬಳಿಚಕ್ರ ಮಾತನಾಡಿ, ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜೀವನ ಸಾಗಿಸುವುದಕ್ಕೆ ನೀರು ಬಹಳ ಮುಖ್ಯವಾಗಿದೆ. ಆದರೆ ಇಲ್ಲಿ ಕುಡಿಯೋಕೆ ನೀರಿಲ್ಲ, ಇದು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿ ಕೆಲಸವಾಗಿದೆ ಎಂದರು.
ಎಷ್ಟೋ ಬಾರಿ ಮನವಿ ಮಾಡಿದರೂ, ಸ್ಥಳೀಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಕ್ಯಾರೆ ಎನ್ನುತ್ತಿಲ್ಲ. ಜನರ ಮಾತಿಗೆ ಮತ್ತು ಹೋರಾಟಗಾರರ ಮನವಿಗೆ, ಉಡಾಫೆ ಉತ್ತರ ನೀಡುತ್ತಾರೆ. ಕೂಡಲೇ ಬಳಿಚಕ್ರ ಗ್ರಾಮಸ್ಥರಿಗೆ ಕುಡಿಯುವ ಮೂಲ ಸೌಕರ್ಯವನ್ನು ಸಂಪೂರ್ಣವಾಗಿ ಒದಗಿಸಬೇಕು. ವಿಳಂಬ ಕಂಡು ಬಂದಲ್ಲಿ ಗ್ರಾಮ ಪಂಚಾಯತ್ ಕಾರ್ಯಾಲಯವನ್ನು ಮುತ್ತಿಗೆ ಹಾಕಲಾಗುತ್ತದೆ ಎಂದು ಹೇಳಿದರು.