×
Ad

ಯಾದಗಿರಿ | ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯಿಂದ ಸಮಾಲೋಚನಾ ಸಭೆ

Update: 2025-05-07 16:45 IST

ಯಾದಗಿರಿ : ನಗರ ಪ್ರದೇಶಗಳು ಅಭಿವೃದ್ದಿಯ ವೇಗ ಪಡೆದುಕೊಂಡಿವೆ. ಆದರೆ ಗ್ರಾಮೀಣ ಪ್ರದೇಶಗಳು ತೀರಾ ಹುಂದುಳಿದ ಕಾರಣ ಮಾನವ ಸೂಚ್ಯಂಕದಲ್ಲಿ ಹಿಂದುಳಿದಿದ್ದೇವೆ. ಹೀಗಾಗಿ ಗ್ರಾಮೀಣ ಜನರ ತಲಾ ಆದಾಯ ಹೆಚ್ಚಿಸಲು ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯ ಡಾ.ಎಸ್.ಟಿ.ಬಾಗಲಕೋಟೆ ಹೇಳಿದರು.

ಬುಧವಾರ ಇಲಿನ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸಮಿತಿಯಿಂದ ಹಿಂದುಳಿದ ಪ್ರದೇಶದಲ್ಲಿ ಇದುವರೆಗಿನ ಅಭಿವೃದ್ಧಿ ಹೊಂದಿರುವ ಆಧಾರದ ಮೇಲೆ ಹೊಸದಾಗಿ ಸೂಚ್ಯಂಕ ನಿಗದಿಪಡಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆ, ಸಂಘ-ಸಂಸ್ಥೆಗಳೊಂದಿಗೆ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿಯೇ ಪ್ರಧಾನವಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ತಲಾ ಆದಾಯ ವೃದ್ಧಿಯಾಗದ ಹೊರತು ಮಾನವ ಸೂಚ್ಯಂಕಪ್ರಗತಿ ಅಸಾಧ್ಯ ಎಂದರು.

ಡಾ.ಡಿ.ಎಂ.ನಂಜುಡಪ್ಪ ಅವರ ವರದಿಯಂತೆ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಇದುವರೆಗೆ 34 ಸಾವಿರ ಕೋಟಿ ರೂ. ಖರ್ಚಾಗಿದೆ. ಕೆಲವು ತಾಲೂಕಿನಲ್ಲಿ ಹಿಂದುಳಿವಿಕೆ ಹೋಗಿದೆಯಾದರು, ಪಾದೇಶಿಕ ಅಸಮಾನತೆ ಇನ್ನು ನೀಗಿಲ್ಲ. ಇಂದಿನ ದಿನಮಾನದಲ್ಲಿ ಖಾಸಗಿ ಕ್ಷೇತ್ರವು ತೀವ್ರಗತಿಯಲ್ಲಿ ಪ್ರಗತಿ ಕಾಣುತ್ತಿರುವುದರಿಂದ ಪ್ರದೇಶದ ಅಭಿವೃದ್ಧಿಗೆ ಅವರ ಸಹಕಾರ ಸಹ ಅಗತ್ಯವಿದೆ. ಸಿ.ಎಸ್.ಆರ್. ನೆರವು ಪಡೆಯುವುದು, ಪಿ.ಪಿ.ಪಿ. ಮಾದರಿಯಲ್ಲಿ ಯೋಜನೆ ಸಾಕಾರಗೊಳಿಸುವ ಅವಶ್ಯಕತೆ ಇದೆ ಎಂದರು.

ಡಾ.ಡಿ.ಎಂ.ನಂಜುಂಡಪ್ಪ ಅವರ 2002ರ ವರದಿಯಲ್ಲಿ ಅಂದಿನ 176 ತಾಲೂಕುಗಳನ್ನು ಹಿಂದುಳಿದ, ಅತಿ ಹಿಂದುಳಿದ, ಅತ್ಯಂತ ಹಿಂದುಳಿದ ಹಾಗೂ ಅಭಿವೃದ್ದಿ ಹೊಂದಿದ ತಾಲೂಕುಗಳೆಂದು 4 ವರ್ಗದಲ್ಲಿ ವರ್ಗೀಕರಿಸಿ ಅದಕ್ಕನುಗುಣವಾಗಿ ಅನುದಾನ ಹಂಚಿಕೆಗೆ ಶಿಫಾರಸ್ಸು ಮಾಡಿದರು. ಅದರಂತೆ 2007-08 ರಿಂದ 2015-16 ರವರೆಗೆ ಹಾಗೂ ತದನಂತರ ಒಟ್ಟಾರೆ 45 ಸಾವಿರ ಕೋಟಿ ರೂ. ಹಿಂದುಳಿದ ಪ್ರದೇಶಕ್ಕೆ ಹಂಚಿಕೆಯಾಗಿ 34 ಸಾವಿರ ಕೋಟಿ ರೂ. ಖರ್ಚಾದರೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕ ಭಾಗದ ವಿಶೇಷವಾಗಿ ಯಾದಗಿರಿ ಸೇರಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಕನಿಷ್ಠ ಮೂಲಸೌಕರ್ಯಗಳಿಂದ ಸಹ ವಂಚಿತ ಪ್ರದೇಶ ಇದಾಗಿದೆ ಎಂದರು.

ಬೆಂಗಳೂರು ನಗರದಿಂದಲೆ ರಾಜ್ಯದ ಬೊಕ್ಕಸಕ್ಕೆ ಶೇ.38 ಆದಾಯ ಬರುತ್ತಿದೆ. ರಾಜ್ಯಕ್ಕೆ ಹೋಲಿಸಿದರೆ ಯಾದಗಿರಿ ಜಿಲ್ಲೆಯಿಂದ ಶೇ.1, ರಾಯಚೂರು ಜಿಲ್ಲೆಯಿಂದ ಶೇ.1.77 ರಷ್ಟು ಆದಾಯ ಬರುತ್ತದೆ. ಇನ್ನು ರಾಜ್ಯದ ಸರಾಸರಿ ತಲಾ ಆದಾಯ 2.20 ಲಕ್ಷ ರೂ. ಗಳಿದ್ದರೆ ಯಾದಗಿರಿ ತಲಾ ಆದಾಯ 1.35 ಲಕ್ಷ ರೂ. ಆಗಿದೆ. 2ನೇ ಮತ್ತು 3ನೇ ಹಂತದ ನಗರಗಳು ಔದ್ಯೋಗಿಕವಾಗಿ ಬೆಳೆಸುವ ಮೂಲಕ ತಲಾ ಆದಾಯದಲ್ಲಿನ ಈ ಅಸಮಾನತೆಯನ್ನು ಹೋಗಲಾಡಿಸಬೇಕಿದೆ ಎಂದರು.

ಮಧ್ಯಮಾವಧಿ ಮತ್ತು ದೀರ್ಘಾವಧಿ ಯೋಜನೆ ರೂಪಿಸಲು ಶಿಫಾರಸ್ಸು :

ದಕ್ಷಿಣ ಕರ್ನಾಟಕದ ಭಾಗದಲ್ಲಿ 25-30 ಮಕ್ಕಳಿಗೆ ಓರ್ವ ಶಿಕ್ಷಕರಿದ್ದರೆ, ಯಾದಗಿರಿಯಲ್ಲಿ 55-76 ಮಕ್ಕಳಿಗೆ ಓರ್ವ ಶಿಕ್ಷಕರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣ ಕ್ಷೇತ್ರ ಸುಧಾರಣೆ ಹೇಗೆ? ಎಂದು ಪ್ರಶ್ನಿಸಿದ ಅವರು, ಹತ್ತಿ, ಭತ್ತ, ತೊಗರಿ ಇಲ್ಲಿ ಬೆಳೆಯಲಾಗುತ್ತದೆ. ಆದಾಯ ಹೆಚ್ಚಿಸುವ ತರಕಾರಿ, ವಾಣಿಜ್ಯ ಬೆಳೆಗಳು ಬೆಳೆಯುವುದಿಲ್ಲ. ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಬೇಕಾದ ಸಂಸ್ಕರಣಾ ಘಟಕ ಇಲ್ಲ. ವಿಶೇಷವಾಗಿ ದುಡಿಯುವ ಕೈಗೆ ಕೆಲಸ ನೀಡುವ ಕಾರ್ಖಾನೆ ಇಲ್ಲ. ಮಹಿಳೆಯರನ್ನು ಆರ್ಥಿಕ ಒಳಗೊಳ್ಳುವಿಕೆಗೆ ಪ್ರೋತ್ಸಾಹಿಸಬೇಕಿದೆ. ಯುವ ಸಮೂಹಕ್ಕೆ ಕೌಶಲ್ಯ ನೀಡಬೇಕಿದೆ ಎಂದ ಅವರು, ಈ ನಿಟ್ಟಿನಲ್ಲಿ ಎಲ್ಲಾ ಆಯಾಮದಿಂದ ಅಧ್ಯಯನ ಮಾಡಿ ಹಿಂದುಳಿವಿಕೆ ಹೋಗಲಾಡಿಸಲು ನೂತನ ತಾಲೂಕುಗಳನ್ನು ಗಣನೆಗೆ ತೆಗೆದುಕೊಂಡು ಮಧ್ಯಮಾವಧಿ ಮತ್ತು ಧೀರ್ಘಾವಧಿ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ಸಮಿತಿ ಶಿಫಾರಸ್ಸು ಮಾಡಲಿದೆ ಎಂದರು.

ಯಾದಗಿರಿ ಬಳಿ ಕೈಗಾರಿಕೆ ಎಸ್ಟೇಟ್ ಸ್ಥಾಪನೆಯಾಗಲಿ :

ಜಿಲ್ಲೆಯಲ್ಲಿ ಕಡೆಚೂರು, ಮುಂಡರಗಿ ಎರಡು ಕೈಗಾರಿಕೆ ಪ್ರದೇಶ ಮತ್ತು ಶಹಾಪುರ-ಸುರಪುರ ಇಂಡಸ್ಟರಿಯಲ್ ಎಸ್ಟೇಟ್ ಪ್ರದೇಶ ಹೊಂದಿದೆ. ಕಡೇಚೂರು ಪ್ರದೇಶ 30-40 ಕಿ.ಮೀ ದೂರ ಇರುವ ಕಾರಣ ಯಾದಗಿರಿ ನಗರಕ್ಕೆ ಸಮೀಪದಲ್ಲಿ ತಾಲೂಕು ಹಂತದಲ್ಲಿಯೂ ಕೈಗಾರಿಕೆ ಎಸ್ಟೇಟ್ ಪ್ರದೇಶ ಸ್ಥಾಪಿಸಬೇಕು. ಉದ್ದಿಮೆದಾರರಿಗೆ ವಾರ್ಷಿಕ ವಹಿವಾಟು ಅಧಾರದ ಮೇಲೆ ನೀಡಲಾಗುವ ಪ್ರೋತ್ಸಾಹಧನದಲ್ಲಿ ಹೆಚ್ಚಿನ ರಿಯಾಯಿತಿ ಕಲ್ಪಿಸಬೇಕು ಎಂದು ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಸತೀಷಕುಮಾರ ಹೇಳಿದರು.

ಸಂಸ್ಕರಣಾ ಘಟಕ ಸ್ಥಾಪಿಸುವುದು ಅಗತ್ಯ :

ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ ಸುಗೂರು ಮಾತನಾಡಿ, ತೊಗರಿ, ಹತ್ತಿ, ಭತ್ತ ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಬೆಳೆಗಳಾಗಿವೆ. ಏಷ್ಯಾ ಖಂಡದಲ್ಲಿ ಉತ್ತಮ ಹತ್ತಿ, ತೊಗರಿ ಉತ್ಪಾದಿಸುವ ಗಿರಿ ಜಿಲ್ಲೆಗೆ ಥ್ರೆಡ್ ಇಂಡಸ್ಟ್ರಿ, ದಾಲ್ ಮಿಲ್ ಇಲ್ಲ. 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೆಂಗಾ ಬೆಳೆಯಲಾಗುತ್ತಿದೆ. ಈ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಮಾರಾಟ ಮಾಡಲು ಸಂಸ್ಕರಣಾ ಘಟಕ ಸ್ಥಾಪಿಸಿದಲ್ಲಿ ಮಾರುಕಟ್ಟೆಗೆ ಬಲ ಸಿಕ್ಕು ರೈತರ ಆದಾಯ ದ್ವಿಗುಣವಾಗಲಿದೆ ಎಂದರು.

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಬರಬೇಕಿದೆ :

ಜಿಲ್ಲೆಯಲ್ಲಿ 3,175 ಶಿಕ್ಷಕರ ಕೊರತೆ ಇರುವುದರಿಂದ ಎಸೆಸೆಲ್ಸಿ ಫಲಿತಾಂಶ ಸುಧಾರಣೆ ಆಗುತ್ತಿಲ್ಲ. 371ಜೆ ಕಾಯ್ದೆಯಡಿ ನೇಮಕಾತಿ, ಮುಂಬಡ್ತಿ ಪಡೆದ ನೌಕರರಿಗೆ ಪ್ರದೇಶದಲ್ಲಿ 10 ವರ್ಷ ಕಡ್ಡಾಯ ಸೇವೆ ಇದ್ದರು, ಅಲ್ಪಾವಧಿಯಲ್ಲಿ ಬೇರೆ ಜಿಲ್ಲೆಗೆ ವರ್ಗಾವಣೆ ಹೊಂದುತ್ತಿರುವುದು ಶೈಕ್ಷಣಿಕ ಕುಂಠಿತಕ್ಕೆ ಪ್ರಮುಖ ಕಾರಣ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಇಲ್ಲದ ಕಾರಣ ಎಸೆಸೆಲ್ಸಿ ಮುಗಿಸಿದ ನಂತರ ಇಲ್ಲಿನ ಮಕ್ಕಳು ಉನ್ನತ ಶಿಕ್ಷಣಕ್ಕೆ ಸೇರಲು ಬೇರೆ ಜಿಲ್ಲೆ ಕಡೆ ಮುಖ ಮಾಡುತ್ತಿದ್ದು, ಇದನ್ನು ತಪ್ಪಿಸಲು ಇಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಜಿಲ್ಲೆಗೆ ಕರೆತರಬೇಕಿದೆ ಎಂದು ಡಿ.ಡಿ.ಪಿ.ಐ ಚೆನ್ನಬಸಪ್ಪ ಮುಧೋಳ ಹೇಳಿದರು.

ಹೈವೇ ಬಳಿ ಟೌನ್‌ಶಿಪ್ ಸ್ಥಾಪಿಸಿ :

ಯಾದಗಿರಿ ಜಿಲ್ಲೆಯಲ್ಲಿ 65ಕಿ.ಮೀ ಸೂರತ್-ಚೆನ್ನೈ ಎಕ್ಸ್ ಪ್ರೆಸ್‌ ಹೈವೆ ಹಾದು ಹೋಗುತ್ತಿದ್ದು, ರಸ್ತೆ ಬದಿಯಲ್ಲಿ ಹೊಸದಾಗಿ ಇಂಡಸ್ಟ್ರಿ ಟೌನ್‌ಶಿಪ್ ಸ್ಥಾಪಿಸಬೇಕು. ನಗರಕ್ಕೆ ರಿಂಗ್ ರೋಡ್ ಅವಶ್ಯಕತೆ ಇದೆ. ಕಡೇಚೂರು ಕೈಗಾರಿಕೆ ಪ್ರದೇಶವು ತಕ್ಕ ಮಟ್ಟಿಗೆ ಫಾರ್ಮ ಹಬ್ ಆಗಿದೆ. ಇಲ್ಲಿ 800 ಎಕರೆ ಜಮೀನು ಲಭ್ಯವಿದ್ದು, ಸೆಮಿ ಕಂಡಕ್ಟರ್ ಸ್ಥಾಪನೆಗೆ ಸೂಕ್ತವಾಗಿದೆ. ಕೃಷಿಗೆ ನೀರಿಲ್ಲ, ಗುಳೆ ತಪ್ಪಿಲ್ಲ. ನೀರಾವರಿ ಯೋಜನೆ ಸಾಕಾರದ ಜೊತೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕೆ ನೀತಿ ಅವಶ್ಯಕ ಎಂದು ಯಾದಗಿರಿ ಚೆಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಚೆನ್ನಮಲ್ಲಿಕಾರ್ಜುನ ಅವರು ಅಭಿಪ್ರಾಯಪಟ್ಟರು.

ಸ್ಲೀಪಿಂಗ್ ಬುದ್ಧ ಪ್ರವಾಸಿ ತಾಣವಾಗಲಿ :

ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸಂತೋಷ ಭರತನೂರ ಮಾತನಾಡಿ, ಜಿಲ್ಲೆಯ ಶಹಾಪುರದಲ್ಲಿರುವ ಸ್ಲೀಪಿಂಗ್ ಬುದ್ಧ ನೋಡಲು ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಿದ್ದು, ಇದನ್ನು ಪ್ರವಾಸಿ ತಾಣವನ್ನಾಗಿಸಿ ಅಭಿವೃದ್ಧಿ ಮಾಡಿದಲ್ಲಿ ಸ್ಥಳೀಯವಾಗಿ ಆರ್ಥಿಕ ವಹಿವಾಟು ಜೋರಾಗಲಿದೆ. ಬೋನಾಳ ಪಕ್ಷಿಧಾಮ, ನಾರಾಯಣಪುರ ಜಲಾಶಯ, ಜಿಲ್ಲೆಯ ಇತರೆ ಫಾಲ್ಸ್ನಲ್ಲಿ ಪ್ರವಾಸಿ ಮೂಲಸೌಕರ್ಯ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯ 451 ಪ್ರಾಥಮಿಕ ಶಾಲೆಗಳ ಪೈಕಿ 94 ಶಾಲೆಗೆ ಶಿಕ್ಷಕರಿಲ್ಲ. 142 ಶಾಲೆಗೆ ಒಬ್ಬನೆ ಶಿಕ್ಷಕ. ಗಣಿತ, ವಿಜ್ಞಾನ, ಇಂಗ್ಲೀಷ್ ಶಿಕ್ಷಕರ ಕೊರತೆ ಹೆಚ್ಚಿದೆ. ಪ್ರಾಥಮಿಕ ಶಿಕ್ಷಣ ನೀಡಲು ಮೂಲಸೌಕರ್ಯ ಕೊರತೆ ಇರುವುದರಿಂದ ಹೇಗೆ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡುವುದು. ಎಲ್ಲಾ ಮಕ್ಕಳ ಏಕಲವ್ಯವಾಗಲು ಸಾಧ್ಯ ಇಲ್ಲ. ಪ್ರತಿಭೆ ಇದ್ದು, ಮಕ್ಕಳು ಅವಕಾಶ ವಂಚಿತರಾಗಿದ್ದಾರೆ ಎಂದು ವೆಂಕಣ್ಣ ಡೊಳ್ಳೆಗೌಡರ್ ಅಭಿಪ್ರಾಯಪಟ್ಟರು. ಮುಂದೆ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಕ.ಕ.ಪ್ರದೇಶದಲ್ಲಿನ ಎಲ್ಲಾ ಶಿಕ್ಷಕರ ಭರ್ತಿ ಮಾಡಿದ ನಂತರ ಉಳಿದ ಪ್ರದೇಶಕ್ಕೆ ಪರಿಗಣಿಸಲಿ ಎಂದು ನಿವೃತ್ತ ಉಪನ್ಯಾಸಕ ಸಿ.ಎಂ.ಪಟ್ಟೆದಾರ ಅವರು ಒತ್ತಾಯ ಮಾಡಿದರು.

ಸಮಾಲೋಚಣೆ ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಡಿ.ಎಚ್.ಓ., ತೋಟಗಾರಿಕೆ ಉಪನಿರ್ದೇಶಕರು, ಮೀನುಗಾರಿಕೆ ಉಪನಿರ್ದೇಶಕರು, ಕೆ.ಕೆ.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು., ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಸೇರಿದಂತೆ ಅನೇಕರು ಯಾದಗಿರಿ ಜಿಲ್ಲೆಯ ಅಭಿವೃದ್ಧಿ ಕುರಿತು ಸಲಹೆಗಳನ್ನು ನೀಡಿದರು.

ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಅವರು ಪ್ರಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಭೌಗೋಳಿಕ ಇತಿಹಾಸದ ಜೊತೆಗೆ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಎಸ್.ಡಿ.ಪಿ. ಯೋಜನೆಯಡಿ ಕೈಗೊಂಡ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯೆ ಸಂಗೀತಾ ಕೆ.ಎನ್., ಜಿಲ್ಲಾ ಪಂಚಾಯತ್ ಸಿ.ಇ.ಓ ಲವೀಶ್ ಓರಡಿಯಾ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News