ಯಾದಗಿರಿ | ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 94 ವರ್ಗಗಳ ಅಸಂಘಟಿತ ಕಾರ್ಮಿಕರ ಸೇರ್ಪಡೆ
ಯಾದಗಿರಿ : ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿಯು ಜಾರಿಗೊಳಿಸುತ್ತಿರುವ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 26 ವರ್ಗಗಳ ಅಸಂಘಟಿತ ಕಾರ್ಮಿಕರನ್ನು ಈಗಾಗಲೇ ಗುರುತಿಸಿ ನೋಂದಣಿ ಮಾಡಲಾಗುತ್ತಿದೆ ಎಂದು ಕಾರ್ಮಿಕ ಅಧಿಕಾರಿ ಶ್ರೀಹರಿ ಅವರು ತಿಳಿಸಿದ್ದಾರೆ.
ಯೋಜನೆಯಡಿ ಪ್ರಸ್ತುತ ಹೊಸದಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ 38 ವರ್ಗಗಳು ಹಾಗೂ ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆ ಅಲೆಮಾರಿ ಪಂಗಡದ ಕುಲ ಕಸುಬಿನಲ್ಲಿ ತೊಡಗಿರುವ 27 ವರ್ಗಗಳ ಕಾರ್ಮಿಕರನ್ನು ಸೇರಿದಂತೆ ಗಿಗ್ ಕಾರ್ಮಿಕರು, ದಿನಪತ್ರಿಕೆ ವಿತರಕರು, ಹಾಗೂ ಮೋಟಾರು ಸಾರಿಗೆ ಕಾರ್ಮಿಕರನ್ನು ಸೇರಿ ಒಟ್ಟು 94 ವರ್ಗಗಳ ಕಾರ್ಮಿಕರನ್ನು ನೋಂದಣಿಮಾಡಲಾಗುತ್ತಿದ್ದು, ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ.
ಹಮಾಲರು, ಟೈಲರಗಳು, ಗೃಹ ಕಾರ್ಮಿಕರು, ಅಗಸರು, ಚಿಂದಿ ಆಯುವವರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಬೀದಿ ಬದಿ ವ್ಯಾಪಾರಿಗಳು, ನೇಕಾರರು, ಸ್ವತಂತ್ರ ಲೇಖನ ಬರಹಗಾರರು, ಪೋಟೋಗ್ರಾಫರಗಳು, ಬಿದಿರು ವೃತ್ತಿಯ ಮೇದಾರರು, ಉಪ್ಪನ್ನು ತಯಾರಿಸುವ ಉಪ್ಪಾರರು, ಪೆಂಡಾಲ ಕಾರ್ಮಿಕರು, ಹಗ್ಗ ತಯಾರಿಸುವ ಬೈಜಂತ್ರಿಗಳು ಹೀಗೆ ಗುರುತಿಸಿದ ಕಾರ್ಮಿಕರನ್ನು ನೋಂದಣಿ ಮಾಡಲಾಗುತ್ತಿದೆ.
ಹೊಸದಾಗಿ ಸೇರ್ಪಡೆ ಮಾಡಲಾಗಿರುವ ಅಸಂಘಟಿತ ವಲಯದ ಹಿಂದುಳಿದ ವರ್ಗಗಳ ಮರದ ಕೆತ್ತನೆ, ಪೊರಕೆ ಕಡ್ಡಿ ತಯಾರಿ, ವಾಲಗ ಊದುವದು, ದನಗಾಹಿ ವೃತ್ತಿ, ಹೈನುಗಾರಿಕೆ, ವಿಗ್ರಹ ಕೆತ್ತನೆ, ಬ್ಯೂಟಿ ಪಾರ್ಲರ್, ಮೀನುಗಾರಿಕೆ, ನಾಟಿ ಔಷಧಿ ತಯಾರಿ, ಕುರಿ ಸಾಕಾಣಿಕೆ, ಬಳೆಗಾರರು, ಗಾಣದ ಕೆಲಸ, ಡೋಲು ಬಡಿವವರು, ಮೀನು ಮಾರಾಟಗಾರರು ಹೀಗೆ 94 ವಿಧದ ಅಸಂಘಟಿತ ಕಾರ್ಮಿಕರನ್ನು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಶಿರ್ಷಿಕೆಯಡಿ ನೋಂದಾಯಿಸಲಾಗುತ್ತಿದ್ದು, ಅರ್ಹರು ಮಂಡಳಿಯ ಆನ್‌ಲೈನ್ www.ksuwssb.karnataka.gov.in ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ಯೋಜನೆಯಡಿ ದೊರೆಯುವ ಸೌಲಭ್ಯಗಳೆಂದರೆ, ಅಪಘಾತ ಪರಿಹಾರ ಅಪಘಾತದಿಂದ ಮರಣ ಹೊಂದಿದ್ದಲ್ಲಿ ನಾಮ ನಿರ್ದೇಸಿತರಿಗೆ 1 ಲಕ್ಷ ರೂ.ಗಳ ಪರಿಹಾರ, ಅಪಘಾತದಿಂದ ಸಂಪೂರ್ಣ, ಭಾಗಶಃ ದುರ್ಬಲತೆ ಹೊಂದಿದ್ದಲ್ಲಿ 1 ಲಕ್ಷ ರೂ.ಗಳ ಪರಿಹಾರ, ಶೇಕಡಾವಾರು ದುರ್ಬಲತೆ ಮೇಲೆ ಆಸ್ಪತ್ರೆ ವೆಚ್ಚ 50,000 ರೂ.ಗಳ ವರಗೆ ಮರುಪಾವತಿ, ಸಹಜ ಮರಣ ಪರಿಹಾರ ವಯೋ ಸಹಜ ಮರಣ ಹೊಂದಿದ್ದಲ್ಲಿ 10,000 ರೂ.ಗಳ ಅಂತ್ಯ ಕ್ರಿಯೆ ವೆಚ್ಚ ಪರಿಹಾರ ನೀಡಲಾಗುತ್ತಿದೆ, ದಾಖಲಾತಿಗಳು ಆಧಾರ ಕಾರ್ಡ್, ಭಾವಚಿತ್ರ, ಪಡಿತರ ಚೀಟಿ ಬ್ಯಾಂಕ್ ಪಾಸ್ ಬುಕ್ ನೋಂದಣಿಗಾಗಿ ಸಲ್ಲಿಸಬೇಕು ಎಂದು ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾರ್ಮಿಕ ನಿರೀಕ್ಷಕರ ಕಚೇರಿ, ಕಾರ್ಮಿಕ ಅಧಿಕಾರಿಗಳ ಕಛೇರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.