ಯಾದಗಿರಿ: ಮಳೆಯ ಅಭಾವದಿಂದ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ನಿರಂತರವಾಗಿ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು. ಇಲ್ಲವಾದರೆ ಐದನೇ ದಿನದಿಂದ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ಶೋಷಿತರ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಮೌಲಾಲಿ ಅನಪುರ ಅವರು ಜೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದಗಿರಿ ತಾಲೂಕಿನಲ್ಲಿ ಮಳೆಯ ತೀವ್ರ ಅಭಾವದಿಂದ ಭತ್ತ, ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ. ಸರ್ಕಾರ ಈಗಾಗಲೇ ತಾಲೂಕನ್ನು ಬರಪೀಡಿತ ಎಂದು ಘೋಷಿಸಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಕೊಳವೆಬಾವಿಗಳ ಮೂಲಕ ಬೆಳೆಗಳಿಗೆ ನೀರುಣಿಸಲು ವಿದ್ಯುತ್‌ನ್ನೇ ಅವಲಂಬಿಸಿದ್ದಾರೆ. ಆದರೆ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದರಿಂದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ಹಿಂದೆ ರೈತರಿಗೆ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಸಲಾಗುತ್ತಿತ್ತು. ಆದರೆ, ಇದೀಗ ಆರು ಗಂಟೆಗಳಿಗೆ ಕಡಿತಗೊಳಿಸಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಒಂದೆಡೆ ಮಳೆಯಿಲ್ಲದೆ ಬೆಳೆಗಳು ಒಣಗುತ್ತಿದ್ದರೆ, ಮತ್ತೊಂದೆಡೆ ವಿದ್ಯುತ್ ಪೂರೈಕೆ ಕಡಿತದಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುವ ಆತಂಕ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರಿಗೆ ನಿರಂತರ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು. ಹಳೆಯ ವಿದ್ಯುತ್ ತಂತಿಗಳನ್ನು ಬದಲಾಯಿಸಬೇಕು. ವಿದ್ಯುತ್ ಪೂರೈಕೆಗೆ ಕ್ಯಾಬಿಟ್ ವೈರ್‌ಗಳನ್ನು ಅಳವಡಿಸಬೇಕು. ಕಡಿಮೆ ವೋಲ್ಟೇಜ್‌ನಿಂದ ಪಂಪ್‌ಸೆಟ್‌ಗಳು ಹಾಗೂ ಮೋಟಾರ್‌ಗಳು ಸುಟ್ಟುಹೋಗುವುದನ್ನು ತಡೆಯಲು ಸಮರ್ಪಕ ವೋಲ್ಟೇಜ್‌ನ ವಿದ್ಯುತ್ ಪೂರೈಸಬೇಕು ಎಂದು ಮೌಲಾಲಿ ಅನಪುರ ನಾಲ್ಕು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟರು.

ಈ ಬೇಡಿಕೆಗಳನ್ನು ನಾಲ್ಕು ದಿನಗಳೊಳಗೆ ಈಡೇರಿಸಬೇಕು. ತಪ್ಪಿದಲ್ಲಿ ಐದನೇ ದಿನದಿಂದ ರೈತರು ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದು, ಇದರಿಂದ ಉಂಟಾಗುವ ಪರಿಣಾಮಗಳಿಗೆ ಜೆಸ್ಕಾಂ ಅಧಿಕಾರಿಗಳೇ ನೇರ ಹೊಣೆಗಾರರಾಗಲಿದ್ದಾರೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮರಿಯಪ್ಪ ಗೋಸಿ, ಸಹದೇವ ಪಸ್ಥಾ, ಅಶೋಕ್ ಹಾಗೂ ಆಂಜನೇಯ ಬಲಗಲ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor