ಸುರಪುರದ ಪ್ರಸನ್ನ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ : ಮಯೂರ ವಾಹನ ಉತ್ಸವ
ಸುರಪುರ: ಪಟ್ಟಣದ ಮುಜುಂದಾರಗಲ್ಲಿಯ ಐತಿಹಾಸಿಕ ಶ್ರೀ ಪ್ರಸನ್ನ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಒಂಬತ್ತು ದಿನಗಳ ಕಾಲ ಪ್ರತಿದಿನ ಒಂದೊಂದು ವಾಹನೋತ್ಸವ ನಡೆಯಲಿದ್ದು, ಮೊದಲ ದಿನ ಆನಂದ ನಿಲಯ ಶೃಂಗಾರೋತ್ಸವ, ಎರಡನೇ ದಿನ ಪೀಠ ಪ್ರಭಾವಳಿ ಅಲಂಕಾರೋತ್ಸವ ನೆರವೇರಿದೆ. ಮೂರನೇ ದಿನವಾದ ಮಂಗಳವಾರ ಶ್ರೀ ಕೃಷ್ಣಾಚಾರ್ಯ ದೇವರ ನೇತೃತ್ವದಲ್ಲಿ ಮಯೂರ ವಾಹನ ಉತ್ಸವ ಜರುಗಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಭಕ್ತರು ಹಾಗೂ ನಗರಸಭೆಯ ಮಾಜಿ ಸದಸ್ಯ ನರಸಿಂಹ ಕಾಂತ ಪಂಚಮಗಿರಿ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯೂ ನವರಾತ್ರಿ ಮಹೋತ್ಸವವನ್ನು ಆಯೋಜಿಸಲಾಗಿದ್ದು, ಒಂಬತ್ತು ದಿನಗಳ ಕಾಲ ನಿತ್ಯವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಇಂದು ಧನ್ವಂತರಿ ಹೋಮ ನಡೆಸುವ ಮೂಲಕ ನಾಡಿನ ಜನರಿಗೆ ಆರೋಗ್ಯ, ಸುಖ, ಸಂತೋಷ ಹಾಗೂ ನೆಮ್ಮದಿ ಲಭಿಸಲಿ ಎಂದು ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿಯಲ್ಲಿ ಭಕ್ತಾದಿಗಳು ಪ್ರಾರ್ಥಿಸಿದ್ದಾರೆ ಎಂದರು.
ಕಳೆದ ವರ್ಷ ಶ್ರೀ ಪ್ರಸನ್ನ ವೆಂಕಟೇಶ್ವರ ದೇವರಿಗೆ ಬೆಳ್ಳಿಯ ಕವಚ ಮಾಡಿಸುವ ಸಂಕಲ್ಪ ಕೈಗೊಳ್ಳಲಾಗಿತ್ತು. ಅದರಂತೆ ಅನೇಕ ಭಕ್ತರು ಬೆಳ್ಳಿಯನ್ನು ದೇಣಿಗೆಯಾಗಿ ನೀಡಿದ್ದರಿಂದ ದೇವರಿಗೆ ಬೆಳ್ಳಿಯ ಕವಚ ಮಾಡಿಸಲಾಗಿದೆ. ದೇವಸ್ಥಾನದಲ್ಲಿ ವೀರ ಆಂಜನೇಯನ ಮೂರ್ತಿಯೂ ಇದ್ದು, ಆಂಜನೇಯ ದೇವರಿಗೂ ಬೆಳ್ಳಿಯ ಕವಚ ಮಾಡಿಸಲು ಭಕ್ತಾದಿಗಳು ಬೆಳ್ಳಿಯನ್ನು ದೇಣಿಗೆಯಾಗಿ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರನ್ನು ಅಕ್ಷತೆ ಹಾಗೂ ಶ್ರೀರಕ್ಷೆ ನೀಡಿ ಗೌರವಿಸಲಾಯಿತು. ದಿನವಿಡೀ ದೇವಸ್ಥಾನಕ್ಕೆ ಆಗಮಿಸಿದ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ದೇವಸ್ಥಾನದ ಕಾರ್ಯಕ್ರಮದಲ್ಲಿ ಮುಖಂಡರಾದ ಶಂಕರ ನಾಯಕ, ಭೀಮಣ್ಣ ಬೇವಿನಾಳ, ವಿರುಪಾಕ್ಷಿ ಕೋನ್ಹಾಳ, ಒಂದು ಕೆ.ಜಿ. ಬೆಳ್ಳಿ ದೇಣಿಗೆ ನೀಡಿದ ಕೋಟಯ್ಯ ಚಿದಳ್ಳಿ, ವಕೀಲ ಉಮಾ ಪಾಟೀಲ್, ದೇವಸ್ಥಾನ ಸಮಿತಿ ಅಧ್ಯಕ್ಷ ಗುರುರಾಜ ಅಗ್ನಿಹೋತ್ರಿ, ಜಿತೇಂದ್ರ ಸಿಂಗ್, ರಾಜೇಶ್ ಜೋಶಿ, ಉಮಾಕಾಂತ್ ಪಂಚಮಗಿರಿ, ದತು ಗುತ್ತೇದಾರ್, ಅನಂತ ಕೃಷ್ಣ, ರಾಜೇಂದ್ರ ಸಿಂಗ್, ಲಿಂಗರಾಜ್ ತಾತಾ, ಈಶ್ವರ ನಾಯಕ, ಅನಿಲ್ ತಿವಾರಿ, ಭೀಮಸೇನ್ ದೇವರು, ರಮೇಶ ಕುಲಕರ್ಣಿ ಹಾಗೂ ರಾಘವೇಂದ್ರ ಕುಲಕರ್ಣಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.