ಯಾದಗಿರಿ | ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗರಸಭೆಯಿಂದ ಸನ್ಮಾನ
ಯಾದಗಿರಿ : ವಿದ್ಯಾರ್ಥಿಗಳ ಜೀವನದಲ್ಲಿ ಎಸೆಸೆಲ್ಸಿ ಒಂದು ಮಹತ್ವದ ಘಟ್ಟ. ಇಲ್ಲಿ ನೀವು ಸರಿಯಾಗಿ ಅಭ್ಯಾಸ ಮಾಡಿದರೆ ಮುಂದಿನ ವ್ಯಾಸಂಗ ಮತ್ತು ಜೀವನ ಸರಿದಾರಿಯಲ್ಲಿ ಸಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಹೇಳಿದರು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ನಗರಸಭೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಐದು ಸಾವಿರ ನಗದು ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿ ಮಾತನಾಡಿದರು.
ಇದು ಒಂದು ಸಣ್ಣ ಕಾಣಿಕೆ, ನಿಮ್ಮ ಪ್ರಯತ್ನಕ್ಕೆ ನಾವು ಕೊಡುವ ಗೌರವದ ಸಂಕೇತವೆಂದ ಅವರು, ಗಿರಿಜಿಲ್ಲೆ ಕೊನೆ ಸ್ಥಾನವೆಂಬ ಹಣೆಪಟ್ಟಿ ಕಳಚಿಕೊಂಡಿದ್ದು ಸಂತಸ ತಂದಿದೆ, ಇದಕ್ಕೆ ಕಾರಣರಾದ ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಸ್ತ ಶಿಕ್ಷಕ ವೃಂದಕ್ಕೆ ಅಭಿನಂದನೆಗಳು. ಹೀಗೆ ಇನ್ನೂ ಹೆಚ್ಚಿನ ಪ್ರಯತ್ನ ಸಾಗಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಿಪಂ ಸಿಇಒ ಲವೀಶ್ ಓರಡಿಯಾ, ವಿದ್ಯಾರ್ಥಿಗಳ ಉನ್ನತ ಭವಿಷ್ಯದ ಮೊದಲ ಹೆಜ್ಜೆ ಇದು. ಮುಂದೆ ಅನೇಕ ಸವಾಲುಗಳು ಮತ್ತು ಕಠಿಣತೆಯಿಂದ ಶಿಕ್ಷಣ ಪೂರೈಸಿ ಉನ್ನತ ಸ್ಥಾನ ಪಡೆಯರಿ ಎಂದು ಹೇಳಿದರು.
ಡಿಡಿಪಿಐ ಸಿ.ಎಸ್.ಮುದೋಳ್ ಮಾತನಾಡಿದರು.
ನಗರಸಭೆ ಉಪಾಧ್ಯಕ್ಷೆ ರೂಕಿಯಾ ಬೇಗಂ, ಪೌರಾಯುಕ್ತ ಉಮೇಶ ಚವ್ಹಾಣ, ಇಂಜಿನಿಯರ್ ರಜನಿಕಾಂತ ಶೃಂಗೇರಿ, ನಗರಸಭೆ ಸದಸ್ಯರು ಸಿಬ್ಬಂದಿ ಸೇರಿದಂತೆಯೇ ಇತರಿದ್ದರು.