×
Ad

ಯಾದಗಿರಿ | ಗೊಂದಡಗಿಯಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿ ಲೋಕರ್ಪಣೆ

Update: 2025-05-15 19:29 IST

ಸೈದಾಪುರ : ಬಸವಾದಿ ಶರಣರಲ್ಲಿ ಒಬ್ಬರಾಗಿ ಅಂದಿನ ಶಿವಭಕ್ತಿ, ಕಾಯಕ, ಪರೋಪಕಾರಿ ಹಾಗೂ ಸಮತವಾದಿಯ ಬಗ್ಗೆ ತನ್ನ ನಿಷ್ಠರ ವಚನಗಳ ಮೂಲಕ ಜನರಿಗೆ ಅರಿವು ಮೂಡಿಸಿದ ಶ್ರೇಷ್ಠ ವಚನಕಾರ ಅಂಬಿಗರ ಚೌಡಯ್ಯ ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧ್ಯಕ್ಷ ಶಾಂತಭೀಷ್ಮಚೌಡಯ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಗೊಂದಡಗಿ ಗ್ರಾಮದಲ್ಲಿ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ನೂತನ ಮೂರ್ತಿ ಲೋಕರ್ಪಣೆ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.

ಅಖಿಲ ಭಾರತೀಯ ಕೋಲಿ ಸಮಾಜದ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಉಮೇಶ ಮುದ್ನಾಳ ಮಾತನಾಡಿ, ದೇವರ ಹೆಸರಿನಲ್ಲಿ ಪ್ರಾಣಿಬಲಿ ನೀಡಿ ಹಣ ವ್ಯರ್ಥ ಮಾಡುವ ಬದಲು ಅದನ್ನು ಮಕ್ಕಳ ಉನ್ನತ ಶಿಕ್ಷಣಕ್ಕೆ ಖರ್ಚುಮಾಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಬಡವರು ಕಷ್ಟಪಟ್ಟು ವರ್ಷಪೂರ್ತಿ ದುಡಿದು ಸಂಗ್ರಹಿಸಿದ ಲಕ್ಷಾಂತರ ಹಣವನ್ನು ಮೂಢ ನಂಬಿಕೆಗೆ ಬಲಿಯಾಗಿ ದೇವರಿಗೆ ಪ್ರಾಣಿಬಲಿಗೆ ಖರ್ಚು ಮಾಡುವುದು ನಿಲ್ಲಿಸುವ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದರು.

ಉತ್ತರ ಕರ್ನಾಟಕದಲ್ಲಿ ಕಬ್ಬಲಿಗರು ಒಗ್ಗಟ್ಟಾಗಿ :

ರಾಜ್ಯದ ವಿಧಾನಸಭೆ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಕೋಲಿ ಕಬ್ಬಲಿಗ ಸಮಾಜ ಹೆಚ್ಚಿರುವ ಮತ್ತು ನಿರ್ಣಾಯ ಪಾತ್ರವಿರುವ ಕ್ಷೇತ್ರಗಳ ಪೈಕಿ ಗುರುಮಠಕಲ್ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಅನೇಕ ಮತಕ್ಷೇತ್ರಗಳಿವೆ. ಇಲ್ಲಿ ನಮ್ಮ ಜನರು ಯಾವುದೇ ರಾಜಕೀಯ ಕುತಂತ್ರಕ್ಕೆ ಒಳಗಾಗದೆ ಒಗ್ಗಟ್ಟಾಗಿ ಇರುವುದು ಅತ್ಯಂತ ಅವಶ್ಯಕವಾಗಿದೆ. ಮುಂದಿನ ದಿನಗಳಲ್ಲಿ ಬರುವ ಯಾವುದೇ ಚುನವಣೆಯಲ್ಲಿ ನಿಮ್ಮ ಶಕ್ತಿಯನ್ನು ತೋರಿಸಿ, ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರವು ನಮ್ಮ ಕಡೆ ಗಮನ ಹರಿಸುತ್ತವೆ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯಾಧ್ಯಕ್ಷ ದತಾತ್ರೇಯ ರೆಡ್ಡಿ ಮನವಿ ಮಾಡಿದರು.

ಸರ್ವ ಸಮಾಜದ ಜನರ ಸಹಭಾಗಿತ್ವದಲ್ಲಿ ಲೋಕರ್ಪಣೆಗೊಂಡ ಚೌಡಯ್ಯ ಮೂರ್ತಿ :

ಗೊಂದಡಗಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಗ್ರಾಮದ ಸರ್ವ ಸಮಾಜದ ಜನರ ಪಾಲ್ಗೊಳುವಿಕೆ ಮತ್ತು ಸಹಭಾಗಿತ್ವದಲ್ಲಿ ಲೋಕರ್ಪಣೆಯಾಗಿದೆ.

ಸಮಾಜದ ಜನರು ತಮ್ಮ ಕೋಪ-ತಾಪವನ್ನು ಕಡಿಮೆ ಮಾಡಿಕೊಂಡು, ದೇವರ ಹೆಸರಿನಲ್ಲಿ ಪ್ರಾಣಿಬಲಿ ನೀಡುವುದನ್ನು ನಿಲ್ಲಿಸಿ ನಿಮ್ಮ ಮಕ್ಕಳಿಗೆ ಸಂಸ್ಕಾರ ಭರಿತ ಉತ್ತಮ ಶಿಕ್ಷಣವನ್ನು ನೀಡಿ. ಶರಣರ ಆದರ್ಶವಗಳನ್ನು ಮೈಗೂಡಿಸಿಕೊಂಡು ವೈಯಕ್ತಿಕ ಮತ್ತು ಸಮಾಜದ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸಿ.

- ಶಾಂತಭೀಷ್ಮಚೌಡಯ್ಯ ಮಹಾಸ್ವಾಮಿಗಳು, ಪೀಠಾಧ್ಯಕ್ಷರು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಹಾವೇರಿ

ಇದಕ್ಕೆ ಮುಂಚಿತವಾಗಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಗುರುಪೀಠದ ಪೀಠಾಧ್ಯಕ್ಷರಾದ ಶಾಂತಭೀಷ್ಮಚೌಡಯ್ಯ ಮಹಾಸ್ವಾಮಿಗಳನ್ನು ಅಶ್ವರೂಢ ರಥದಲ್ಲಿ ಕುರಿಸಿ, ಮಹಿಳೆಯರ ಕುಂಭದೊಂದಿಗೆ ವಿವಿಧ ವಾದ್ಯಗಳ ಮೂಲಕ ಮೆರವಣಿಗೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ನೇರಡಗಂ ಪಶ್ಚಿಮಾದ್ರಿ ವಿರಕ್ತಮಠದ ಪೀಠಾಧಿಪತಿ ಪಂಚಮ ಸಿದ್ದಲಿಂಗ ಮಹಾಸ್ವಾಮಿ, ಕ್ಷೀರಲಿಂಗಯ್ಯ ಮಹಾಸ್ವಾಮಿ ಚೇಗುಂಟ, ಸಿದ್ದಚೇತನಾಶ್ರಮ ಸಿದ್ದರೂಡ ಮಠದ ಪೀಠಾಧದಿಪತಿ ಸೋಮೇಶ್ವರಾನಂದ ಮಹಾಸ್ವಾಮಿ, ಉತ್ತನಯ್ಯಸ್ವಾಮಿ, ಮಹಾಲಿಂಗಯ್ಯ ಸ್ವಾಮಿ ಗೊಂದಡಗಿ, ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯಾಧ್ಯಕ್ಷ ದತಾತ್ರೇಯರೆಡ್ಡಿ, ಸೈದಾಪುರ ಕೋಲಿ ಕಬ್ಬಲಿಗ ಸಮಾಜದ ಉಪಾಧ್ಯಕ್ಷ ವೆಂಕಟೇಶ ಗಡದ್, ಕಾರ್ಯದರ್ಶಿ ಪ್ರಭು ಗೂಗಲ್, ತಾಯಪ್ಪ ಚಿಗರಿ, ಸೇರಿದಂತೆ ವಿವಿಧ ಸಮಾಜದ ಗ್ರಾಮಸ್ಥರು ಭಾಗಿಯಾಗಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News