ಯಾದಗಿರಿ | ರೈತರು ಹೆಚ್ಚಿನ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಮುಂದೆ ಬರಬೇಕು: ಶಾಸಕ ತುನ್ನೂರ್
ಯಾದಗಿರಿ: ತುಂತುರು ನೀರಾವರಿ ಘಟಕಗಳನ್ನು ಬಳಸಿ ರೈತರು ಹೆಚ್ಚಿನ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಮುಂದೆ ಬರಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.
ನಗರದ ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಯಿಂದ 2024-25 ನೇ ಸಾಲಿನ ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆ ಉತ್ಪಾದನಾ ಪದ್ದತಿ ಅಡಿಯಲ್ಲಿ 385 ರೈತರಿಗೆ ತುಂತುರು ನೀರಾವರಿ ಘಟಕಗಳನ್ನು ವಿತರಣೆ ಮಾಡಿದರು.
ಈಗ 11 ಗ್ರಾಮಗಳ ರೈತರಿಗೆ ವಿತರಣೆ ಮಾಡಲಾಗಿದ್ದು, ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೈತರಿಗೆ ಇವುಗಳನ್ನು ವಿತರಿಸಲಾಗುವುದೆಂದರು. ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಮುಟ್ಟಿಸಬೇಕೆಂದು ಶಾಸಕರು ಸೂಚಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಮಾತನಾಡಿ, ಕೃಷಿಯಲ್ಲಿ ಬೆಳೆಗಳನ್ನು ಬೆಳೆಯಲು ತುಂತುರು ನೀರಾವರಿ ಘಟಕಗಳು ತುಂಬಾ ಅನುಕುಲವಾಗಿದ್ದು, ಸಕಾಲದಲ್ಲಿ ಮತ್ತು ಸರಿಯಾದ ಪ್ರಮಾಣದ ನೀರನ್ನು ಬೆಳೆಗಳಿಗೆ ಸಿಗುವುದರಿಂದ ರೈತರಿಗೆ ಹೆಚ್ಚಿನ ಇಳುವರಿ ಬರುತ್ತದೆ ಎಂದರು.
ಉತ್ತಮ ಇಳುವರಿ ಮತ್ತು ಆದಾಯವನ್ನು ನೀಡಲು ತುಂತುರು ನೀರಾವರಿ ಸಹಕಾರಿಯಾಗಿದ್ದು, ರೈತರ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಂತ್ರಿಕ ಅಧಿಕಾರಿಗಳಾದ ಯಾಮರೆಡ್ಡಿ, ಮದುಕಾಂತ, ಜಯಪ್ಪ, ಕಭೇರಿ ಅಧೀಕ್ಷಕರಾದ ವೆಂಕಟೇಶ ಎಂ ಹಿರೆನೂರ್, ಕೃಷಿ ಅಧಿಕಾರಿಗಳಾದ ಅಯ್ಯಣ್ಣ, ನರೇಶ ಇದ್ದರು.