×
Ad

ವಿದ್ಯೆ ಇಲ್ಲದಿದ್ದರೆ ಬದುಕು ಶೂನ್ಯ: ಮೌಲಾನ ಆದಿಲ್ ನದ್ವಿ

Update: 2025-08-19 18:39 IST

ಕಾಪು: ಮನುಷ್ಯನಿಗೆ ವಿದ್ಯೆ ಇಲ್ಲದಿದ್ದರೆ ಆತನ ಬದುಕು ಬರೀ ಶೂನ್ಯ. ಕೇವಲ ಸಂಪತ್ತಿನಿಂದ ಅವನಿಗೆ ಏನೂ ಸಾಧಿಸಲು ಸಾಧ್ಯವಾಗುದಿಲ್ಲ. ವಿದ್ಯೆಯ ಮೂಲಕ ಜ್ಞಾನಗಳಿಸಲು ಪ್ರಯತ್ನಿಸಬೇಕು. ಲೌಕಿಕ ಜ್ಞಾನ ಗಳಿಸು ದರೊಂದಿಗೆ, ಧಾರ್ಮಿಕ ಜ್ಞಾನವನ್ನು ಕೂಡಾ ಅಷ್ಟೇ ಮುತುವರ್ಜಿಯಿಂದ ಗಳಿಸಬೇಕು. ಈ ಬಗ್ಗೆ ಪವಿತ್ರ ಕುರ್‌ಆನ್‌ನಲ್ಲಿ ಸ್ಪಷ್ಟವಾಗಿ ತಿಳಿಸಿದೆ ಎಂದು ಆಯಿಷಾ ಮಸ್ಜಿದ್ ನೆಜಾರ್‌ನ ಧರ್ಮ ಗುರುಗಳಾದ ಮೌಲಾನ ಆದಿಲ್ ನದ್ವಿ ಯವರು ಹೇಳಿದರು.

ಅವರು ಕಾಪುವಿನಲ್ಲಿ ಬೋರ್ಡ್ ಆಫ್ ಇಸ್ಲಾಮಿಕ್ ಕರ್ನಾಟಕ ಕಾಪು ಸೆಂಟರ್ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದರು.

ಜಮಾಅತೆ ಇಸ್ಲಾಮಿ ಹಿಂದ್‌ನ ಸದಸ್ಯೆ ರೇಷ್ಮಾ ಬೈಲೂರು ಮಾತನಾಡಿ, ಮನುಷ್ಯನು ಭೂಮಿಗೆ ಬಂದ ಉದ್ದೇಶ, ಬದುಕು ಮತ್ತು ಪರಲೋಕದ ಜೀವನದ ಬಗ್ಗೆ ಅಧ್ಯಯನ ಮಾಡಬೇಕು. ಈ ಆದ್ಯಯನದಿಂದ ಸಿಗುವ ಜ್ಞಾನವನ್ನು ತನ್ನಲ್ಲಿ ಅಳವಡಿಸಿಕೊಂಡು ಅದರ ಪ್ರಯೋಜನ ಸಮಾಜದಲ್ಲಿರುವ ಇತರರಿಗೂ ಸಿಗಬೇಕು. ಆವಾಗ ಮಾತ್ರ ಆತ ಗಳಿಸಿದ ಜ್ಞಾನ ಸಾರ್ಥಕವಾಗುವುದು ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದವ ಜಮಾಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲದ ಅಧ್ಯಕ್ಷರಾದ ಅನ್ವರ್ ಅಲಿ ಮಾತ ನಾಡಿ, ಜಮಾಅತೆ ಇಸ್ಲಾಮಿ ಹಿಂದ್ ಈ ರಾಷ್ಟ್ರದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವ, ಕೆಡುಕನ್ನು ಅಳಿಸಿ ಒಳಿತನ್ನು ಸಂಸ್ಥಾಪಿಸುವ, ಯುವ ಪೀಳಿಗೆಯನ್ನು ನೈತಿಕ ಮೇರೆಯಲ್ಲಿ ಮುನ್ನಡೆಸುವ, ಸಮಾಜದಲ್ಲಿ ಶಾಂತಿ, ಪ್ರೀತಿ ಸೌಹಾರ್ಧತೆ ಕಾಪಿಡುವ ಕೆಲಸ ಮಾಡುತ್ತಿದೆ ಇದರೊಂದಿಗೆ ತಮ್ಮನ್ನು ತೊಡಗಿಸಿಕೊಳ್ಳಿ ಎಂದರು.

ಬಿ.ಐ.ಇ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರನ್ನು ಪ್ರಶಸ್ತಿ ಮತ್ತು ಸರ್ಟಿಫಿಕೇಟ್ ನೀಡಲಾಯಿತು. ಎಸ್‌ಐಓ ಮತ್ತು ಜಿಐಓ ವರ್ತುಲದಲ್ಲಿ ಭಾಗವಹಿಸುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಎಸ್‌ಎಸ್‌ಎಲ್‌ಸಿಯಲ್ಲಿ ಮತ್ತು ಪಿ.ಯು.ಸಿಯಲ್ಲಿ 80% ಕ್ಕಿಂತ ಹೆಚ್ಚು ಅಂಕ ಗಳಿಸಿದ್ದವರಿಗೆ ಅಭಿನಂದಿಸಲಾಯಿತು. ಸಿಐಓನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜಾಕೀರ್ ಹುಸೈನ್, ಆಸೀಫ್ ಜಿ.ಡಿ, ಅಷ್ಫಾಕ್ ಅಹಮದ್ ಮುಜಾವರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮೆಹರೂಫ ರವರು ನಿರೂಪಿಸಿದರು. ಸಯ್ಯದ್ ಮುಸ್ತಖೀಮ್ ರವರು ಧನ್ಯವಾದ ನೀಡಿದರು.

ಫರಾನ ಬೇಗಮ್ ಕುರ್‌ಆನ್ ಪಠಿಸಿದರು. ಮುಹಮ್ಮದ್ ಶರೀಫ್ ಶೇಕ್ ಸ್ವಾಗತಿಸಿದರು. ಬಿಐಇನ ಸಂಚಾಲಕಿ ಶೇಹೆನಾಜ್ ಪ್ರಾಸ್ತಾವಿಕ ಭಾಷಣ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News