×
Ad

ಮಂಗಳೂರು | ಸಾರ್ವಜನಿಕರಿಂದ ಕುದ್ರೋಳಿ ಜಾಮಿಯಾ ಮಸೀದಿಯ ವೀಕ್ಷಣೆ

Update: 2025-09-14 14:41 IST

ಮಂಗಳೂರು, ಸೆ.14 : ಕುದ್ರೋಳಿಯ ಜಾಮಿಯಾ ಮಸೀದಿ ಆಡಳಿತ ಸಮಿತಿ, ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಇದರ ವತಿಯಿಂದ ಸಾರ್ವಜನಿಕರಿಗೆ ಮಸೀದಿಯನ್ನು ವೀಕ್ಷಿಸುವ ಅವಕಾಶವನ್ನು ರವಿವಾರ ಕಲ್ಪಿಸಲಾಯಿತು. ಮಧ್ಯಾಹ್ನ 12ರಿಂದ ಸರ್ವಧರ್ಮೀಯರು ಮಸೀದಿ ವೀಕ್ಷಿಸತೊಡಗಿದ್ದು, ಮುಸ್ಸಂಜೆ 7ರವರೆಗೆ ವೀಕ್ಷಿಸಬಹುದಾಗಿದೆ.

ಅದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಇದು ದಿವ್ಯತೆಯ ದರ್ಶನವಾಗಿದೆ. ಪ್ರಾರ್ಥನೆಯ ವೇಳೆ ಕಣ್ಣು ಮುಚ್ಚಿದರೂ ಆಂತರಿಕ ಕಣ್ಣು ತೆರೆಯುತ್ತೇವೆ ಎಂದು ಹೇಳಿದರು.

ಹೋಲಿ ರೊಸಾರಿಯೊ ಚರ್ಚ್‌ನ ಧರ್ಮಗುರು ಫಾ. ವಲೇರಿಯನ್ ಡಿಸೋಜ ಮಾತನಾಡಿ, ಧರ್ಮಗಳ ತಿರುಳು ಪರಸ್ಪರ ಪ್ರೀತಿಯಾಗಿದೆ. ದೇವಸ್ಥಾನ, ಮಸೀದಿ, ಚರ್ಚ್‌ಗಳ ಆಚರಣೆಗಳು ಎಲ್ಲರಿಗೂ ತಿಳಿದಿರಬೇಕು. ಇದು ದೇವರ ಪ್ರೇರಣೆಯ ಹೊಸ ಹೆಜ್ಜೆಯಾಗಿದೆ. ಈ ಹೆಜ್ಜೆಗಳು ಇಲ್ಲಿಗೆ ನಿಲ್ಲಬಾರದು. ಸದಾ ಮುಂದುವರಿಯಬೇಕು. ಜನರು ಪರಸ್ಪರ ಅರ್ಥ ಮಾಡಿಕೊಂಡು ಬದುಕಲು ಕಲಿಯಬೇಕು ಎಂದು ಹಾರೈಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಜೈರಾಜ್ ಎಚ್., ಯುಎಇ ಮೊಗವೀರ ಸಂಘದ ಅಧ್ಯಕ್ಷ ಲೋಕೇಶ್ ಪುತ್ರನ್, ಬೆಂಗರೆ ಮಹಾಸಭಾ ಅಧ್ಯಕ್ಷ ಚೇತನ್ ಬೆಂಗರೆ, ಬರಕಾ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲ ಬಿ.ಎಸ್.ಶರ್ಫುದ್ದೀನ್ ಶುಭ ಹಾರೈಸಿದರು.

ಕುದ್ರೋಳಿ ಜಾಮಿಯಾ ಮಸೀದಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ಅಧ್ಯಕ್ಷತೆ ವಹಿಸಿದ್ದರು. ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಉತ್ತರದ ಅಧ್ಯಕ್ಷ ಇಸ್ಹಾಕ್ ಪುತ್ತೂರು ಪ್ರವಾದಿ ಸಂದೇಶ ನೀಡಿದರು.

ಕುದ್ರೋಳಿ ಖಾಝಿ ಮುಫ್ತಿ ಶೇಕ್ ಮುತಹ್ಹರ್ ಹುಸೈನ್ ಖಾಸ್ಮಿ, ಶಾಹ ಅಮೀರ್ ಮಸೀದಿಯ ಖತೀಬ್ ರಿಯಾಝುಲ್ ಹಕ್ ರಷಾದಿ, ಮಾಜಿ ಕಾರ್ಪೊರೇಟರ್ ಅಬೂಬಕರ್, ಅಬ್ದುಲ್ ಅಝೀಝ್ ಮತ್ತಿತರರು ಉಪಸ್ಥಿತರಿದ್ದರು.

ಮೌಲಾನ ಶಫೀವುಲ್ಲಾ ಕುರ್‌ಆನ್ ಪಠಿಸಿದರು. ಆಸಿಫ್ ಹುಸೇನ್ ಅನುವಾದ ವಾಚಿಸಿದರು. ಕೆ.ಎಂ.ಅಶ್ರಫ್ ಸ್ವಾಗತಿಸಿದರು. ಮುಹಮ್ಮದ್ ಆಲಿ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು.


Delete Edit


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News