ಅನುಚಿತವಾಗಿ ವರ್ತಿಸಿದ ಬಿಹಾರ ಸಿಎಂ ಕ್ಷಮೆಯಾಚಿಸಲು ಜನವಾದಿ ಮಹಿಳಾ ಸಂಘಟನೆ ಒತ್ತಾಯ
ಮಂಗಳೂರು, ಡಿ.18: ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ನೀಡುವಾಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಸ್ಲಿಂ ಮಹಿಳೆಯ ನಕಾಬ್ ಎಳೆದು ಅವಮಾನಿಸಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟಯೆ ದ.ಕ. ಜಿಲ್ಲಾ ಸಮಿತಿ ಖಂಡಿಸಿದೆ. ಅಲ್ದಲೆ ತಕ್ಷಣ ಬಿಹಾರ ಮುಖ್ಯಮಂತ್ರಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದೆ.
ರಾಜ್ಯದ ಅತ್ಯುನ್ನತ ಹುದ್ದೆಯನ್ನು ಹೊಂದಿರುವ ವ್ಯಕ್ತಿಯು ಅಸಭ್ಯ ರೀತಿಯಲ್ಲಿ ವರ್ತಿಸುವುದು ಗಂಭೀರ ಸ್ವರೂಪದ ಪ್ರಮಾದವಾಗಿದೆ. ಇದು ಅವಮಾನಕರ ಮತ್ತು ನಾಚಿಕೆಗೇಡಿನ ಕೃತ್ಯವಾಗಿದೆ.
ಹಿಜಾಬ್, ನಕಾಬ್ ಕೇವಲ ಬಟ್ಟೆಯ ತುಂಡು ಅಲ್ಲ. ಇದು ನಂಬಿಕೆ, ಗುರುತಿನ ಅಭಿವ್ಯಕ್ತಿ ಮತ್ತು ವೈಯಕ್ತಿಕ ಆಯ್ಕೆಯಾಗಿದೆ. ಮಹಿಳೆ ಏನು ಧರಿಸಬೇಕೆಂದು ನಿರ್ಧರಿಸುವ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡಲು ರಾಜ್ಯ ಸರಕಾರ ಮಾಡುವ ಯಾವುದೇ ಪ್ರಯತ್ನವು ಸಂವಿಧಾನದ ಸಂಪೂರ್ಣ ಉಲ್ಲಂಘನೆಯಾಗಿದೆ. ಮುಖ್ಯಮಂತ್ರಿಯ ಈ ನೀಚ ಕೃತ್ಯವು ಸಾಂವಿಧಾನಿಕ ಮೌಲ್ಯಗಳು, ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಮಹಿಳೆಯರ ಸ್ವಾಯತ್ತತೆಯ ಮೂಲತತ್ವಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷೆ ಕಿರಣ ಪ್ರಭಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಮೀಳಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.