×
Ad

ವಾರ್ಷಿಕ ಸಾಮಾನ್ಯ ಸಭೆ| ಗುಣಮಟ್ಟದ ಹಾಲು ಸಂಗ್ರಹಣೆಯಲ್ಲಿ ದ.ಕ.ಹಾಲು ಒಕ್ಕೂಟಕ್ಕೆ ರಾಜ್ಲದಲ್ಲೇ ಅಗ್ರಸ್ಥಾನ: ರವಿರಾಜ ಹೆಗ್ಡೆ

Update: 2025-09-20 19:56 IST

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 2024-25ನೇ ಸಾಲಿನಲ್ಲಿ ಹಿಂದಿನ ವರ್ಷಕ್ಕಿಂತ ಶೇ 5.84ರಷ್ಟು ಪ್ರಗತಿ ಸಾಧಿಸಿದೆ. ಒಕ್ಕೂಟವು ಗುಣಮಟ್ಟದ ಹಾಲಿನ ಸಂಗ್ರಹಣೆಯಲ್ಲಿ ರಾಜ್ಯದಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದ್ದಾರೆ.

ಕುಲಶೇಖರದ ಕೋರ್ಡೆಲ್ ಹಾಲ್‌ನಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2024-25ನೇ ಸಾಲಿನಲ್ಲಿ ಒಟ್ಟು ರೂ. 1,173.70 ಕೋಟಿಯ ವಹಿವಾಟು ನಡೆಸಿ ರೂ.12.79 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 2024-25ನೇ ಸಾಲಿನಲ್ಲಿ ಸಂಘಗಳು ಒಕ್ಕೂಟಕ್ಕೆ ಹಾಲು ಸರಬರಾಜು ಮಾಡಿದ ಪ್ರಮಾಣಕ್ಕನುಗುಣವಾಗಿ ಶೇ. 25 ಬೋನಸನ್ನು ಹಾಗೂ ಶೇ.15 ರಂತೆ ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ.

ಒಟ್ಟು ಬೋನಸ್ ರೂ.2.33 ಕೋಟಿ ಹಾಗೂ ಷೇರು ಡಿವಿಡೆಂಡ್ ರೂ.3.04 ಕೋಟಿ ಸೇರಿದಂತೆ ಒಟ್ಟು ರೂ. 5.37 ಕೋಟಿಗಳನ್ನು ಸಂಘಗಳಿಗೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ರೈತರಿಗೆ ಪ್ರತೀ ಲೀಟರ್ ಹಾಲಿಗೆ ಅತೀ ಹೆಚ್ಚಿನ ದರ ಹಾಗೂ 1.5 ರೂ. ಪ್ರೋತ್ಸಾಹ ಒಕ್ಕೂಟದಿಂದ ನೀಡುವುದರೊಂದಿಗೆ ವಿವಿಧ ಅನುದಾನಗಳ ರೂಪದಲ್ಲಿ ಪ್ರತಿ ಕೆ.ಜಿ. ಹಾಲಿಗೆ ರೂ. 0.91 ರಂತೆ ರೈತರಿಗೆ ನೀಡುತ್ತಿ ರುವ ಏಕೈಕ ಒಕ್ಕೂಟವಾಗಿರುತ್ತದೆ ಎಂದರು.

ದ.ಕ. ಹಾಗೂ ಉಡುಪಿ ಜಿಲ್ಲೆ ಕರಾವಳಿ ಪ್ರದೇಶವಾದ್ದರಿಂದ ಹಾಲಿನ ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಿದ್ದು, ಹಾಲು ಉತ್ಪಾದನೆಯನ್ನು ಪ್ರೋತ್ಸಾಹಿಸಲು ಉಭಯ ಜಿಲ್ಲೆಗಳಿಗೆ ಪ್ರತಿ ಲೀಟರ್ ಹಾಲಿನ ಮಾರಾಟ ದರವನ್ನು ಕನಿಷ್ಠ 3 ರಂತೆ ಪ್ರತ್ಯೇಕವಾಗಿ ನಿಗದಿಪಡಿಸಿ ಹೆಚ್ಚುವರಿ ಮಾರಾಟ ದರವನ್ನು ಹಾಲು ಉತ್ಪಾದಕರಿಗೆ ನೇರವಾಗಿ ವರ್ಗಾಯಿಸಿದ್ದಲ್ಲಿ ಅನುಕೂಲವಾಗುವುದೆಂದು ಅವರು ಹೇಳಿದರು.

ಕಡಿಮೆ ವೆಚ್ಚದಲ್ಲಿ ಅಧಿಕ ಹಾಲು ಉತ್ಪಾದನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಸಿರು ಮೇವಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಒಕ್ಕೂಟದ ವ್ಯಾಪ್ತಿಯ ಹತ್ತು ಹಾಲು ಉತ್ಪಾದಕರ ಸಂಘದ ವ್ಯಾಪ್ತಿಯಲ್ಲಿ ಎರಡು ಎಕರೆ ಜಾಗದಲ್ಲಿ ಮೇವಿನ ಅಭಿವೃದ್ಧಿಗೆ ರೂ.20 ಲಕ್ಷ ಅನುದಾನ ನೀಡುವುದರ ಮೂಲಕ ಹಸಿರು ಮೇವಿನ ಅಭಿವೃದ್ಧಿ ಹಾಗೂ ಹೈನುಗಾರಿಕೆಗೆ ಉತ್ತೇಜಿಸಲು ಯೋಜಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷರು ತಿಳಿಸಿದರು.

ಪ್ರಶಸ್ತಿ, ವಿದ್ಯಾರ್ಥಿ ವೇತನ ವಿತರಣೆ: ವರದಿ ಸಾಲಿನಲ್ಲಿ ಒಕ್ಕೂಟ, ಜಿಲ್ಲೆಯ ಅತ್ಯುತ್ತಮ ಹಾಲು ಉತ್ಪಾದಕರ ಸಹಕಾರ ಸಂಘ, ಮಹಿಳಾ ಸಹಕಾರ ಸಂಘ, ಉತ್ತಮ ಹೈನುಗಾರರು, ಉತ್ತಮ ಗುಣಮಟ್ಟದ ಸಂಘಗಳಿಗೆ ಪ್ರಶಸ್ತಿ , ಎಸ್‌ಎಸ್‌ಎಲ್‌ಸಿಯಲ್ಲಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹಾಲು ಉತ್ಪಾದಕರ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.

*ಒಕ್ಕೂಟದ ಅತ್ಯುತ್ತಮ ಸಂಘ -ಉಡುಪಿ ಜಿಲ್ಲೆಯ ಹಾಳೆಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘ , ಜಿಲ್ಲಾವಾರು ಉತ್ತಮ ಸಂಘ- ದ.ಕ ಜಿಲ್ಲೆಯ ಗುಂಡೂರಿ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಉಡುಪಿ ಜಿಲ್ಲೆಯ ಕಾಂತಾವರ ಹಾಲು ಉತ್ಪಾದಕರ ಸಹಕಾರ ಸಂಘ,

* ಒಕ್ಕೂಟದ ಉತ್ತಮ ಮಹಿಳಾ ಸಂಘ -ದ.ಕ ಜಿಲ್ಲೆಯ ರಾಮನಗರ ಮತ್ತು ಉಡುಪಿ ಜಿಲ್ಲೆಯ ಆರೂರು ಮಹಿಳಾ ಸಹಕಾರ ಸಂಘ

* ಜಿಲ್ಲಾವಾರು ಉತ್ತಮ ಬಿಎಂಸಿ - ದ.ಕ ಜಿಲ್ಲೆಯ ಕುಕ್ಕೇಡಿ ಮತ್ತು ಉಡುಪಿ ಜಿಲ್ಲೆಯ ಮೇಕೋಡು ಹಾಲು ಉತ್ಪಾದಕರ ಸಹಕಾರ ಸಂಘ

*ಒಕ್ಕೂಟದ ಉತ್ತಮ ಹೈನುಗಾರರು: ಮೇಕೋಡು ಹಾಲು ಉತ್ಪಾದಕರ ಸಂಘದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಂಘದ ಸಾವಿತ್ರಿ ಭಟ್ ಹಾಗೂ ಬೆಳಪು ಹಾಲು ಉತ್ಪಾದಕರ ಸಹಕಾರ ಸಂಘದ ದೇವಿಪ್ರಸಾದ್ ಶೆಟ್ಟಿ.

ಸಭೆಯಲ್ಲಿ ಉಪಾಧ್ಯಕ್ಷ ಉದಯ ಎಸ್.ಕೋಟ್ಯಾನ್ ಹಾಗೂ ನಿರ್ದೇಶಕರಾದ ಸುಚರಿತ ಶೆಟ್ಟಿ, ಎಸ್.ಬಿ. ಜಯರಾಮ ರೈ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಎನ್. ಮಂಜಯ್ಯ ಶೆಟ್ಟಿ, ಬಿ. ಸುಧಾಕರ ರೈ, ಸವಿತ ಎನ್. ಶೆಟ್ಟಿ, ಎಂ. ಸುಧಾಕರ ಶೆಟ್ಟಿ, ಕೆ. ಚಂದ್ರಶೇಖರ ರಾವ್, ಕೆ. ಶಿವಮೂರ್ತಿ, ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ನಂದರಾಮ್ ರೈ, ಮಮತಾ ಆರ್ ಶೆಟ್ಟಿ. ಎಚ್. ಪ್ರಭಾಕರ, ಭರತ್ ಎನ್ ಹಾಗೂ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್. ರಮೇಶ್, ಡಾ. ಅರುಣ್‌ಕುಮಾರ್ ಶೆಟ್ಟಿ, ಉಪ ನಿರ್ದೇಶಕರು(ಪ.ಸಂ.) ಹಾಗೂ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ. ಹಾಜರಿದ್ದರು.

ಒಕ್ಕೂಟದ ಉಪಾಧ್ಯಕ್ಷ ಉದಯ್ ಎಸ್. ಕೋಟ್ಯಾನ್ ಸ್ವಾಗತಿಸಿ, ವ್ಯವಸ್ಥಾಪಕ ನಿರ್ದೇಶಕ ವಿವೇಕ್.ಡಿ. ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News