ಜಿಎಸ್‌ಟಿ ದರ ಇಳಿಕೆಯಿಂದ ದೇಶದ ಆರ್ಥಿಕ ಶಕ್ತಿ ವೃದ್ಧಿ: ಸಂಸದ ಬ್ರಿಜೇಶ್ ಚೌಟ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಜಿಎಸ್‌ಟಿ ದರ ಇಳಿಕೆ ಮಾಡಿರುವುದ ರಿಂದ ದೇಶದ ಆರ್ಥಿಕ ಶಕ್ತಿ ವೃದ್ಧಿಸಲಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನವರಾತ್ರಿ ಸಂಭ್ರಮದ ವೇಳೆ ಜಿಎಸ್‌ಟಿ ಇಳಿಕೆಯ ಮೂಲಕ ಉಳಿತಾಯದ ಉತ್ಸವ ಸಾಕಾರವಾಗುತ್ತಿದೆ. ಜಿಎಸ್‌ಟಿ ಇಳಿಕೆಯ ಹಿನ್ನೆಲೆಯಲ್ಲಿ ಅ.20ರವರೆಗೆ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ವಿಶೇಷ ಅಭಿಯಾನ ಹಾಗೂ ನಾಗರಿಕರ ಜತೆ ಸಂವಾದ ನಡೆಸಲಾಗುವುದು ಎಂದರು.
ಜಿಎಸ್‌ಟಿ ದರ ಇಳಿಕೆಯಿಂದ ವ್ಯಾಪಾರಿಗಳು, ಉದ್ದಿಮೆದಾರರು, ಗ್ರಾಹಕರಿಗೆ ಅನುಕೂಲವಾಗಲಿದೆ. ಬಿಜೆಪಿ ಆರ್ಥಿಕ ಪ್ರಕೋಷ್ಠದ ಜತೆಗೂಡಿ ಅಂಗಡಿ, ಮಾರುಕಟ್ಟೆಗಳಿಗೆ ತೆರಳಿ ಜನರ ಜತೆ ಸಂವಾದ, ಜಾಗೃತಿ ನಡೆಸಲಾಗುವುದು. ಜಿಎಸ್‌ಟಿ ಇಳಿಕೆಯ ಪರಿಣಾಮವನ್ನು ಮಾರುಕಟ್ಟೆಯಲ್ಲಿ ಕಾಣಲಾಗುತ್ತಿದೆ. ಜನರ ಖರೀದಿ ಶಕ್ತಿ ಹೆಚ್ಚಾಗಿದೆ. ಬೇಡಿಕೆಯೊಂದಿಗೆ ಉತ್ಪಾದನೆಯೂ ಅಧಿಕವಾಗಲಿದೆ. ಆಹಾರ, ಬಟ್ಟೆ, ವಸತಿ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ವಾಹನಗಳ ಬೆಲೆ ಈಗಾಗಲೇ ಇಳಿಕೆಯಾಗಿದೆ. ಹನಿ ನೀರಾವರಿ, ಕೃಷಿ ಯಂತ್ರೋಪಕರಣಗಳ ಬೆಲೆ ಇಳಿಕೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಬ್ರಿಜೇಶ್ ಚೌಟ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಆರ್ಥಿಕ ಪ್ರಕೋಷ್ಠ ಜಿಲ್ಲಾ ಸಂಚಾಲಕ ಸಿಎ ಶಾಂತಾರಾಮ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ, ಪ್ರಕೋಷ್ಠಗಳ ಜಿಲ್ಲಾ ಸಹ ಸಂಚಾಲಕ ಪ್ರಸನ್ನ ದರ್ಬೆ, ಕೋಶಾಧಿಕಾರಿ ಸಂಜಯ ಪ್ರಭು, ಮಾಧ್ಯಮ ಸಂಚಾಲಕ ವಸಂತ ಪೂಜಾರಿ ಉಪಸ್ಥಿತರಿದ್ದರು.