ಶೈಕ್ಷಣಿಕ-ಕೈಗಾರಿಕಾ ಕ್ಷೇತ್ರದ ಸಮನ್ವಯತೆಯ ಮೂಲಕ ಅಭಿವೃದ್ಧಿ ಗೆ ಒತ್ತು; ಸಚಿವ ಪ್ರಿಯಾಂಕ್ ಖರ್ಗೆ
ನಿಟ್ಟೆ: ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅಕ್ವಮರೀನ್ ಇನ್ನೋವೇಶನ್ ಉದ್ಘಾಟನೆ
ಕೊಣಾಜೆ: ಕರ್ನಾಟಕ ಸರ್ಕಾರವು ಅಕಾಡೆಮಿಕ್ ಕ್ಷೇತ್ರ ಮತ್ತು ಕೈಗಾರಿಕೆಯನ್ನು ಕೆಲವೊಂದು ನೀತಿಗಳೊಂದಿಗೆ ಸಮನ್ವಯಗೊಳಿಸುವ ಮೂಲಕ ನವೀನತೆ ಮತ್ತು ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದರಲ್ಲಿ ಬದ್ಧವಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‍ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಅವರು ಬುಧವಾರ ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆ ಪಾನೀರ್ ನಲ್ಲಿರುವ ನಿಟ್ಟೆ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅಕ್ವಮರೀನ್ ಇನ್ನೋವೇಶನ್ ಇದರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಿಟ್ಟೆ ಕಳೆದ ಎರಡು ದಶಕಗಳಲ್ಲಿ ಸಾಧಿಸಿರುವುದು ನಿಜಕ್ಕೂ ಅಪೂರ್ವ. ಭಾರತದಲ್ಲಿ ಮೊದಲ ಬಾರಿಗೆ ಆಕ್ವಾಮೆರೈನ್ ಅತ್ಯುನ್ನತ ಕೇಂದ್ರವನ್ನು ಸ್ಥಾಪಿಸಿರುವುದು ನಿಟ್ಟೆಗೆ ಮಾತ್ರವಲ್ಲ, ಕರ್ನಾಟಕದ ಬೆಳವಣಿಗೆಯ ಹಾದಿಯಲ್ಲಿಯೂ ಬಹುಮುಖ್ಯ ಹೆಜ್ಜೆಯಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಣ ಸಂಸ್ಥೆಗಳು, ಅತ್ಯುನ್ನತ ಕೇಂದ್ರಗಳು, ವೆಂಚರ್ ಕ್ಯಾಪಿಟಲ್ ಜಾಲಗಳು, ಹ್ಯಾಕಥಾನ್‌ಗಳು ಮತ್ತು ನವೀನತಾ ಕಾರ್ಯಕ್ರಮಗಳು ಮುಖ್ಯವಾಗಿ ಬೆಂಗಳೂರು ನಗರದಲ್ಲಿ ಮಾತ್ರ ಕೇಂದ್ರೀಕರಿಸಲ್ಪಟ್ಟಿವೆ. ನಿಟ್ಟೆಯ ಈ ಉಪಕ್ರಮದಿಂದ ಸರ್ಕಾರದ ತಲುಪುವಿಕೆ ದೂರದ ಪ್ರದೇಶಗಳಿಗೂ ವಿಸ್ತರಿಸಿ, ಯುವ ಮನಸ್ಸುಗಳಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ ಎಂದರು.
ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಪ್ರೊ.ಎಂ.ಶಾಂತರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ್, ನಿಟ್ಟೆ ವಿವಿ ಕುಲಪತಿ ಪ್ರೊ .ಎಂ.ಎಸ್.ಮೂಡಿತ್ತಾಯ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಡೆ ವಿನಾಯಕ್ ಕಾರ್ಬಾರಿ ಮೊದಲಾದವರು ಉಪಸ್ಥಿತರಿದ್ದರು.
ನಿಟ್ಟೆ ವಿವಿ ಕುಲಪರಿ ಪ್ರೊ.ಹರ್ಷ ಹಾಲಹಳ್ಳಿ ಸ್ವಾಗತಿಸಿದರು. ಎನ್ ಯುಸಿಎಸ್ ಇಆರ್ ನಿರ್ದೇಶಕ ಪ್ರೊ.ಅನಿರ್ಬನ್ ಚಕ್ರಬೊರ್ತಿ ವಂದಿಸಿದರು. ಡಾ.ಅಕ್ಷತಾ ನಿರೂಪಿಸಿದರು.