×
Ad

ಘಟನಾ ಸ್ಥಳಕ್ಕೆ ಆಗಮಿಸುವಂತೆ ಕಾಲು ಕಳೆದುಕೊಂಡಿರುವ ಸಂತ್ರಸ್ತೆಗೆ ನೋಟಿಸ್ ನೀಡಿ ಅಧಿಕಾರಿಯೇ ಗೈರು: ಆಕ್ರೋಶ

ಮಂಜನಾಡಿ ಗುಡ್ಡ ಕುಸಿತ ದುರಂತ ಪ್ರಕರಣ

Update: 2025-10-09 10:33 IST

ಕೊಣಾಜೆ: ಮಂಜನಾಡಿ ಉರುಮಣೆ ಕೋಡಿ ಗುಡ್ಡ ಹಾಗೂ ಮನೆ ಕುಸಿತ ಪ್ರಕರಣದಲ್ಲಿ ಅತ್ತೆ, ಇಬ್ಬರನ್ನು ಹಾಗೂ ತನ್ನ ಎರಡು ಕಾಲುಗಳನ್ನು ಕಳೆದುಕೊಂಡ ಅಶ್ವಿನಿಯವರಿಂದ ಮಾಹಿತಿ ಪಡೆಯುವುದಕ್ಕಾಗಿ ಸ್ಥಳಕ್ಕೆ ಆಗಮಿಸುವಂತೆ ನೋಟಿಸ್ ನೀಡಿದ್ದ ಅಧಿಕಾರಿಯೇ ಗೈರುಹಾಜರಾದ ಘಟನೆ ಬುಧವಾರ ನಡೆದಿದೆ. ಅಧಿಕಾರಿಗಳ ನಡೆಗೆ ಸಂಬಂಧಿಕರು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಈ ಬಾರಿಯ ಮಳೆಗಾಲದ ಆರಂಭದಲ್ಲಿ ಮಂಜನಾಡಿ ಉರುಮಣೆ ಎಂಬಲ್ಲಿ ಗುಡ್ಡ ಮನೆಯ ಮೇಲೆ ಕುಸಿದು ಬಿದ್ದ ಪರಿಣಾಮ ಆಶ್ವಿನಿಯವರ ಇಬ್ಬರು ಪುಟಾಣಿ ಮಕ್ಕಳು ಹಾಗೂ ಅತ್ತೆ ಮೃತಪಟ್ಟಿದ್ದರು. ಅಶ್ವಿನಿ ತನ್ನೆರಡು ಕಾಲುಗಳನ್ನೂ ಕಳೆದುಕೊಂಡಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆಯುವುದಕ್ಕಾಗಿ ಅಶ್ವಿನಿ ಅ.8 ರಂದು 11 ಗಂಟೆಗೆ ಘಟನಾ ಸ್ಥಳದಲ್ಲಿ ಹಾಜರಿರುವಂತೆ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವಾಟ್ಸ್ ಆ್ಯಪ್ ಮೂಲಕ ನೋಟಿಸ್ ನೀಡಿದ್ದರು.

ಅದರಂತೆ ಅಶ್ವಿನಿಯವರನ್ನು ಕುಟುಂಸ್ಥರು ಹರೇಕಳದ ತಾಯಿ ಮನೆಯಿಂದ ಘಟನಾ ಸ್ಥಳಕ್ಕೆ ಕರೆತಂದಿದ್ದಾರೆ. ಆದರೆ 11 ಗಂಟೆಯಾದರೂ ತನಿಖಾಧಿಕಾರಿಗಳು ಸ್ಥಳಕ್ಕೆ ಬಾರದ ಕಾರಣ ಮೊಬೈಲ್ ಮೂಲಕ ಅಧಿಕಾರಿಯನ್ನು ಸಂಬಂಧಿಕರು ಸಂಪರ್ಕಿಸಿದ್ದಾರೆ. ಈ ವೇಳೆ ಅಧಿಕಾರಿ, ತಾನು ಅನಾರೋಗ್ಯಕ್ಕೀಡಾಗಿದ್ದಾನೆ. ಆದ್ದರಿಂದ ಬರುವುದಿಲ್ಲ ಎಂದು ಬೆಳಗ್ಗೆ 9:30ರ ಸುಮಾರಿಗೆ ಅಶ್ವಿನಿಯವರ ಸಂಬಂಧಿಕರ ಮೊಬೈಲ್ ಗೆ ಸಂದೇಶ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಬಳಿಕ ಹೆಚ್ಚು ಮಾತನಾಡದೇ ಮೊಬೈಲ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

 

ಅಧಿಕಾರಿಗಳ ಬೇಜವಾಬ್ದಾರಿಯುತ ವರ್ತನೆಯ ಬಗ್ಗೆ ಕುಟುಂಬಿಕರು, ಸ್ಥಳೀಯರು ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು ಮಂಡಲ ಬಿಜೆಪಿ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಖಂಡಿಸಿದ್ದಾರೆ.

ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮುರಳೀಧರ್ ಕೊಣಾಜೆ, ರೈತ ಮೋರ್ಚಾ ಅಧ್ಯಕ್ಷ ಪದ್ಮನಾಭ ಗಟ್ಟಿ ಕೊಣಾಜೆ, ಕಾರ್ಯದರ್ಶಿ ರಮೇಶ್ ಬೆದ್ರೊಳಿಕೆ, ಜೀವನ್ ಪ್ರಕಾಶ್ ಮಂಜನಾಡಿ, ಉದಯ್ ಮಂಜನಾಡಿ, ರಾಧಾಕೃಷ್ಣ, ಧಕ್ಷರಾಜ್, ನಿತೇಶ್, ಜಗದೀಶ್ ಕುಲಾಲ್, ಪತಿ ಸೀತಾರಾಮ್, ಸಹೋದರರಾದ ಪವನ್, ಜಗದೀಶ್ ಕುಲಾಲ್, ಕೃಷ್ಣ ಕುಲಾಲ್, ಸುಖಾನಂದ್ ಶೆಟ್ಟಿ ಮುಂತಾದವರು ಸ್ಥಳದಲ್ಲಿ ಉಪಸ್ಥಿತರಿದ್ದು, ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿರುವ ಅಶ್ವಿನಿ ಅವರಿಗೆ ನ್ಯಾಯ ಸಿಗದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News