×
Ad

ಮಂಗಳೂರು: ವಕೀಲ ರಾಜೇಶ್ ಕಿಶೋರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯ

Update: 2025-10-09 21:41 IST

ಮಂಗಳೂರು: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿಯವರ ಮೇಲೆ ಕೋರ್ಟ್ ಕಲಾಪದ ವೇಳೆಯೇ ಶೂ ಎಸೆಯಲು ಯತ್ನಿಸಿರುವ ಹಿರಿಯ ವಕೀಲ ರಾಕೇಶ್ ಕಿಶೋರ್ ವಿರುದ್ಧ ದೇಶದ್ರೋಹ ಮತ್ತು ನ್ಯಾಯಾಂಗ ನಿಂದನೆಯ ಪ್ರಕರಣ ದಾಖಲಿಸಿ , ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ ದ. ಕ. ಜಿಲ್ಲಾ ಸಮಿತಿಯು ಆಗ್ರಹಿಸಿದೆ.

ನಗರದ ಕ್ಲಾಕ್‌ಟವರ್ ಬಳಿ ಗುರುವಾರ ಸಂಜೆ ನಡೆದ ಪ್ರತಿಭಟನಾ ಸಭೆಯಲ್ಲಿ ವಕೀಲ ರಾಜೇಶ್ ಕಿಶೋರ್ ಅವರ ಕೃತ್ಯವನ್ನು ಖಂಡಿಸಿದ ಸಮಿತಿಯ ಧುರೀಣರು , ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದ.ಕ. ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿರುವುದು ಸನಾತನ ಕೋಮುವಾದಿ ಗಳು ಇಡೀ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೂಡಿರುವ ಷಡ್ಯಂತ್ರದ ಭಾಗವಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣದ ದ. ಕ. ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ ಅವರು ‘ ನ್ಯಾಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಏಕಾಏಕಿ ಶೂ ಯತ್ನಿಸಿರುವುದು ಪ್ರಜಾಪ್ರಭುತ್ವ ಕ್ಕೆ ಕಪ್ಪುಚುಕ್ಕಿ. ದೇಶಪ್ರೇಮಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಮಂಗಳೂರು ಸಾಮರಸ್ಯ ವೇದಿಕೆ ಅಧ್ಯಕ್ಷೆ ಮಂಜುಳಾ ನಾಯಕ್ ಅವರು ಮಾತನಾಡಿ ‘ಹಿರಿಯ ವಕೀಲ ರಾಕೇಶ್ ಸಂವಿಧಾನ,ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ. ಅವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು.

ಕರ್ನಾಟಕ ಮೀಸಲಾತಿ ಸಂರಕ್ಷಣಾ ಸಮಿತಿ ರಾಜ್ಯ ಸಂಚಾಲಕ ಶುಭಾಷ್ ಕಾನಡೆ ಅವರು‘ ಬಿ.ಆರ್ ಗವಾಯಿ ಅವರಿಗೆ ನ್ಯಾಯಾಂಗದಲ್ಲಿ ಅನುಭವದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ಸ್ಥಾನ ಸಿಕ್ಕಿದೆ. ಯಾರದೊ ಕುಮ್ಮಕ್ಕಿನಿಂದ ಅವರ ಮೇಲೆ ಶೂ ಎಸೆಯಲು ವಕೀಲ ರಾಜೇಶ್ ಕಿಶೋರ್ ವಿಫಲ ಯತ್ನ ನಡೆಸಿದ್ದಾರೆ. ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಕೊಂಕಣಿ ಅಕಾಡೆಮಿ ಸದಸ್ಯ ಸಮರ್ಥ ಭಟ್, ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ದಿನೇಶ್ ಮೂಳೂರು, ಜಿಲ್ಲಾ ಸಂಘಟನಾ ಸಂಚಾಲಕ ರಘು. ಕೆ. ಎಕ್ಕಾರು , ಕರ್ನಾಟಕ ಮೊಗೇರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಂದರ ಮೇರ, ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ , ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಾನಂದ. ಡಿ, ಜಿಲ್ಲಾ ನೌಕರರ ಒಕ್ಕೂಟದ ಉಸ್ತುವಾರಿ ಎಚ್. ಡಿ. ಲೋಹಿತ್, ರುಕ್ಕಯ್ಯ ಕರಂಬಾರ್, ಕೃಷ್ಣ ಕೆ ಎಕ್ಕಾರ್, ದಲಿತ ಕಲಾ ಮಂಡಳಿ ಜಿಲ್ಲಾ ಸಂಚಾಲಕರಾದ ಕಮಲಾಕ್ಷ ಬಜಾಲ್, ಸಂಕಪ್ಪ ಕಾಂಚನ್, ನಾಗೇಶ್ ಚಿಲಿಂಬಿ, ಅನಿಲ್ ಕಂಕನಾಡಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News