×
Ad

ವಿದೇಶಿ ವಿವಿಗಳಿಂದ ರಾಜ್ಯದ ವಿವಿಗಳಿಗೆ ಸವಾಲು: ಸಚಿವ ಡಾ.ಎಂ.ಸಿ. ಸುಧಾಕರ್

Update: 2025-10-18 21:46 IST

ಮಂಗಳೂರು: ಕರ್ನಾಟಕದಲ್ಲಿ ವಿದೇಶಿ ವಿಶ್ವವಿದ್ಯಾನಿಲಯಗಳು ತಳವೂರುತ್ತಿದ್ದು, ಇದರಿಂದಾಗಿ ರಾಜ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ವಿಶ್ವವಿದ್ಯಾನಿಲಯಗಳಿಗೆ ಸವಾಲಾಗಲಿದೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದ್ದಾರೆ.

ನಗರದ ಸಂತ ಅಲೋಶಿಯಸ್ ವಿವಿ ಎಲ್‌ಸಿಆರ್‌ಐ ಸಭಾಂಗಣದಲ್ಲಿ ಕ್ಷೇವಿಯರ್ ಬೋರ್ಡ್ ಆಫ್ ಹೈಯರ್ ಎಜುಕೇಶನ್‌ನ 25ನೇ ತ್ರೈಮಾಸಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ವಿದೇಶಿ ವಿವಿಗಳ ಸವಾಲನ್ನು ಎದುರಿಸಲು ನಮ್ಮ ನೆಲದ ವಿವಿಗಳು ತಯಾರಾಗಬೇಕಿದೆ ಎಂದರು.

ಕರ್ನಾಟಕದಲ್ಲಿ ಲಿವರ್‌ಪೂಲ್ ವಿಶ್ವವಿದ್ಯಾಲಯವು ಈಗಾಗಲೇ ಸ್ಥಾಪನೆ ನಿಟ್ಟಿನಲ್ಲಿ ಸರಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಕರ್ನಾಟಕದಲ್ಲಿ ವಿದೇಶಿ ವಿವಿಗಳು ಸ್ಥಾಪನೆಯ ನಿಟ್ಟಿನಲ್ಲಿ ಗಮನ ಹರಿಸಿದ್ದು, ಈಗಾಗಲೇ ಲ್ಯಾಂಕಾಸ್ಟರ್ ಕರ್ನಾಟಕದಲ್ಲಿ ತನ್ನ ಕ್ಯಾಂಪಸ್ ಸ್ಥಾಪನೆಗೆ ಮುಂದಾಗಿದೆ. ಅಲ್ಲದೆ ಲಂಡನ್‌ನ ಇಂಪೀರಿಯಲ್ ಕಾಲೇಜು ತನ್ನ ಸಂಶೋಧನಾ ಕೇಂದ್ರವನ್ನು ತೆರೆದಿದ್ದು, ಇನ್ನು ಮುಂದೆ ವಿದೇಶಿ ವಿವಿಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗಬೇಕಾಗಿಲ್ಲ. ಕಡಿಮೆ ಖರ್ಚಿನಲ್ಲಿ ವಿದೇಶಿ ವಿವಿಯಲ್ಲಿ ದೊರೆಯುವ ಶಿಕ್ಷಣ ನಮ್ಮಲ್ಲೇ ದೊರೆಯಲಿದೆ ಎಂದರು.

ಏಷ್ಯನ್ ಅಭಿವೃದ್ಧಿ ಬ್ಯಾಂಕಿನ ಗಣನೀಯ ಆರ್ಥಿಕ ಬೆಂಬಲದೊಂದಿಗೆ, ಕರ್ನಾಟಕವು ಕೌಶಲ್ಯ ಮತ್ತು ಉದ್ಯೋಗ ಸಿದ್ಧತೆಯ ಮೇಲೆ ಕೇಂದ್ರೀಕರಿಸುವ ಮಾದರಿ ಕಾಲೇಜುಗಳು, ಆಧುನಿಕ ಪಾಲಿಟೆಕ್ನಿಕ್‌ಗಳನ್ನು ಸ್ಥಾಪಿಸಲು ಚಿಂತನೆ ನಡೆಸಿದೆ ಎಂದು ನುಡಿದರು.

ಮಹಿಳಾ ಸಬಲೀಕರಣದ ಮಹತ್ವದ ಹೆಜ್ಜೆಯಾಗಿ ವಿದ್ಯಾರ್ಥಿನಿಯರಿಗೆ ಸಾರ್ವತ್ರಿಕ ವಿದ್ಯಾರ್ಥಿವೇತನ ಕಾರ್ಯಕ್ರಮ ವನ್ನು ಪ್ರಾರಂಭಿಸಲು ಅಜೀಂ ಪ್ರೇಮ್‌ಜಿ ಫೌಂಡೇಶನ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಈ ಉಪಕ್ರಮವು ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ಸುಮಾರು 37,000 ವಿದ್ಯಾರ್ಥಿನಿಯರಿಗೆ ಪ್ರಯೋಜವಾಗಲಿದೆ ಎಂದರು.

ಭಾರತ ಸರಕಾರದ ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಆರ್ಮ್‌ಸ್ಟ್ರಾಂಗ್ ಪಾಮೇ ಮುಖ್ಯ ಅತಿಥಿಯಾಗಿದ್ದರು. ಸಮ್ಮೇಳನ ಆರಂಭಕ್ಕೂ ಮುನ್ನ ನಾಗ್ಪುರದ ಆರ್ಚ್‌ಬಿಷಪ್ ಹಾಗೂ ಸಿಬಿಸಿಐ ಶಿಕ್ಷಣ ಮತ್ತು ಸಂಸ್ಕೃತಿ ಆಯೋಗದ ಅಧ್ಯಕ್ಷ ರೆ.ಫಾ. ಡಾ. ಎಲಿಯಾಸ್ ಗೋನ್ಸಾಲ್ವಿಸ್ ದಿವ್ಯ ಬಲಿಪೂಜೆ ನೆರವೇರಿಸಿದರು.

ಕ್ಷೇವಿಯರ್ ಬೋರ್ಡ್ ಆಫ್ ಹೈಯರ್ ಎಜಕೇಶನ್‌ನ ಅಧ್ಯಕ್ಷ ರೆ.ಫಾ. ಡಾ. ಜೋಜಿ ರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಿವಿ ಮಾಜಿ ಉಪ ಕುಲಪತಿ ಡಾ.ಸಿಂಥಿಯಾ ಮೆನೆಜಸ್ ದಿಕ್ಚೂಚಿ ಭಾಷಣ ಮಾಡಿದರು.

ಕ್ಷೇವಿಯರ್ ಬೋರ್ಡ್ ಆಫ್ ಹೈಯರ್ ಎಜಕೇಶನ್‌ನ ಅಧ್ಯಕ್ಷ ಉಪಾಧ್ಯಕ್ಷ ರೆ.ಫಾ. ಗಿಲ್ಬರ್ಟ್ ಮಸ್ಕರೇನಸ್ ಪ್ರಧಾನ ಕಾರ್ಯದರ್ಶಿ ಭಗಿನಿ ಡಾ. ದೀಪ್ತಿ ಯುಎಫ್‌ಎಸ್ , ಜೊತೆ ಕಾರ್ಯದರ್ಶಿ ಡಾ.ಫಾ . ಬೈಜು ಅಂಥೋನಿ ಸಿಎಂ ಹಾಗೂ ಸಂತ ಅಲೋಶಿಯಸ್ ವಿವಿ ಉಪಕುಲಪತಿ ಫಾ. ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ ಉಪಸ್ಥಿತರಿದ್ದರು.










Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News