ಪೊಲೀಸ್ ಇಲಾಖೆ ನೊಂದವರ ಧ್ವನಿಯಾಗಿದೆ: ನ್ಯಾ. ಬಸವರಾಜ್
ಪೊಲೀಸ್ ಹುತಾತ್ಮರ ದಿನಾಚರಣೆ
ಮಂಗಳೂರು: ಸಮಾಜದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲು ಪೊಲೀಸರು ಹಗಲು ಇರುಳು ಶ್ರಮಿಸುತ್ತಿದ್ದಾರೆ. ನೊಂದವರ ಧ್ವನಿಯಾಗಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಸೇವೆ ಸಲ್ಲಿಸುವ ಪೊಲೀಸ್ ಇಲಾಖೆಯ ಸೇವೆ ಶ್ಲಾಘನೀಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಹೇಳಿದ್ದಾರೆ.
ಮಂಗಳೂರು ಸಿಟಿ ಪೊಲೀಸ್ ವತಿಯಿಂದ ಸೋಮವಾರ ನಡೆದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ನ್ಯಾಯಾಧೀಶರು 2001ರಲ್ಲಿ ಸಂಸತ್ ಭವನದ ಮೇಲೆ ದಾಳಿಯಾದಾಗ, 2008 ರಲ್ಲಿ ತಾಜ್ ಹೊಟೇಲ್ ಮೇಲೆ ದಾಳಿಯಾದಾಗ ಪೊಲೀಸರು ಉತ್ತಮ ಕರ್ತವ್ಯ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ, ಕೊರೋನ ಸಂದರ್ಭ ಪೊಲೀಸರು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದರು ಎಂದು ಶ್ಲಾಘಿಸಿದರು.
2024 ಸೆ.2024ರಿಂದ 2025 ಆಗಸ್ಟ್31 ರ ಅವಧಿಯಲ್ಲಿ ಭಾರತದಲ್ಲಿ ಒಟ್ಟು 191 ಪೊಲೀಸರು ಹುತಾತ್ಮರಾ ಗಿದ್ದು, ಕರ್ನಾಟಕ ರಾಜ್ಯದಲ್ಲಿ 8 ಪೊಲೀಸರು ಹುತಾತ್ಮರಾಗಿದ್ದಾರೆ. ಅವರನ್ನು ಸ್ಮರಿಸಿ ಗೌರವ ವಂದನೆ ಸಲ್ಲಿಸಲಾಯಿತು.
ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಪಶ್ಚಿಮ ವಲಯ ಮಹಾ ನಿರೀಕ್ಷಕ ಅಮಿತ್ ಸಿಂಗ್, ಮಂಗಳೂರು, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ದ.ಕ.ಜಿಲ್ಲಾ ಎಸ್ಪಿ ಡಾ. ಅರುಣ್ ಕೆ. , ಅರಣ್ಯ ಇಲಾಖೆಯ ಸಿಸಿಎಫ್ ಕರಿಕಾಲನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ, ಕಿರಿಯ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಮತ್ತು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಅಧಿಕಾರಿಗಳು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.