×
Ad

ಪಾಣೆಮಂಗಳೂರು: ನಾಪತ್ತೆಯಾಗಿದ್ದ ರಿಕ್ಷಾ ಚಾಲಕನ ಮೃತದೇಹ ಪತ್ತೆ

Update: 2025-10-30 23:05 IST

ಬಂಟ್ವಾಳ : ಇಲ್ಲಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣೆಮಂಗಳೂರು ಹಳೆಯ ನೇತ್ರಾವತಿ ಸೇತುವೆ ಮೇಲೆ ಅಟೋ ರಿಕ್ಷಾ ನಿಲ್ಲಿಸಿ ಅ.29 ರಂದು ನಾಪತ್ತೆಯಾಗಿದ್ದ ಚಾಲಕ, ಮೆಲ್ಕಾರು ಸಮೀಪದ ಮಾರ್ನಬೈಲು ನಿವಾಸಿ ಪೀಟರ್ ಲೋಬೋ (60) ಅವರ ಮೃತದೇಹ ಗುರುವಾರ ತಲಪಾಡಿ ಡ್ಯಾಂ ಬಳಿ ಪತ್ತೆಯಾಗಿದೆ.

ಬುಧವಾರ ಮುಂಜಾನೆ ಮನೆಯಿಂದ ಹೊರಟ ಇವರು ತನ್ನ ಅಟೋ ರಿಕ್ಷಾವನ್ನು ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದರು. ಸೇತುವೆಯ ಮೇಲೆ ಅನಾಥ ಅಟೋ ರಿಕ್ಷಾ ನೋಡಿದ ಸ್ಥಳೀಯರು ಈ ಬಗ್ಗೆ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದು, ಸ್ಥಳೀಯ ಈಜುಪಟು ಯುವಕರಾದ ಮುಹಮ್ಮದ್ ಮಮ್ಮು ಗೂಡಿನಬಳಿ, ಹನೀಫ್ ಅಕ್ಕರಂಗಡಿ, ನಿಸಾರ್ ಎಂ ಕೆ ಹಾಗೂ ಇಬ್ರಾಹಿಂ ಎಂ ಕೆ ಅವರ ನೇತೃತ್ವದ ತಂಡ ಅಗ್ನಿಶಾಮಕ ಸಿಬ್ಬಂದಿಗಳ ಜೊತೆ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದರೂ ಸಂಜೆವರೆಗೂ ಚಾಲಕನ ಇರುವಿಕೆ ಬಗ್ಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ.

ಗುರುವಾರ ತಲಪಾಡಿ ಡ್ಯಾಂ ಬಳಿ ಮರಕ್ಕೆ ಸಿಲುಕಿದ ರೀತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ಕಾಣೆಯಾದ ಪೀಟರ್ ಲೋಬೋ ಅವರದ್ದೇ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೃತ ಪೀಟರ್ ಲೋಬೋ ಅವರು ಪಾಶ್ರ್ವವಾಯು ಪೀಡಿತರಾಗಿದ್ದು, ತನ್ನ ಖಾಯಿಲೆಯಿಂದ ಯಾರಿಗೂ ಅವಲಂಬಿತನಾಗಬಾರದು ಎಂಬ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ಅವರ ಪತ್ನಿ ಅನಿತಾ ಲೋಬೋ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News