ಸಮಾಜ ಸೇವೆಯಲ್ಲೇ ಸಾರ್ಥಕತೆ ಇದೆ: ಕೊರಿನ್ ರಸ್ಕ್ವಿನ್ಹಾ
'ಅನ್ಲೀಶಿಂಗ್ ಪೊಟೆನ್ಶಿಯಲ್: ದಿ ಪವರ್ ವಿತ್ತ್ ಇನ್' ಕುರಿತು ವಿಶೇಷ ಉಪನ್ಯಾಸ
ಮಂಗಳೂರು: ಸಮಾಜವನ್ನು ಬಿಟ್ಟು ನಾವು ಇರಲಿ ಸಾಧ್ಯವಿಲ್ಲ. ಸಮಾಜ ಸೇವೆಯಲ್ಲೇ ಸಾರ್ಥಕತೆ ಇದೆ ಎಂದು ಮಂಗಳೂರಿನ ವೈಟ್ ಡವ್ಸ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಕೊರಿನ್ ರಸ್ಕ್ವಿನ್ಹಾ ಅಭಿಪ್ರಾಯಪಟ್ಟಿದ್ದಾರೆ.
ಅವರು ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ಮಂಗಳೂರು ಇದರ ಭಾಷಾ ಅಧ್ಯಯನ ವಿಭಾಗ ಹಾಗೂ ಸಾಹಿತ್ಯಿಕ ಸಂಘಗಳ ಸಹಯೋಗದೊಂದಿಗೆ ಕೂಳೂರು ಕ್ಯಾಂಪಸ್ ನ ವೈಎಂಕೆ ಸಭಾಂಗಣದಲ್ಲಿ ಮಾ.10ರ ಮಂಗಳವಾರ ನಡೆಸಿದ 'ಅನ್ಲೀಶಿಂಗ್ ಪೊಟೆನ್ಶಿಯಲ್: ದಿ ಪವರ್ ವಿತ್ತ್ ಇನ್' ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ತಮ್ಮ ಆಂತರಿಕ ಶಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿ ಸಮಾಜಮುಖಿಯಾಗಿ ಬೆಳೆಯಬೇಕು. ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸಿ ನಿಲ್ಲುವ ಮನೋಧೈರ್ಯವಿರಬೇಕು. ಅಚಲವಾದ ನಿರ್ಧಾರ ಮತ್ತು ಶ್ರಮಿಸುವ ಗುಣ ಯಶಸ್ಸಿಗೆ ಕಾರಣ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಪ್ರೊ. ಜೀವನ್ ರಾಜ್ ಅವರು, ಸಹಾನುಭೂತಿಯನ್ನು ಬೆಳೆಸಿಕೊಳ್ಳಬೇಕು ಮತ್ತು ಮಾನವೀಯತೆಗೆ ಸೇವೆ ಸಲ್ಲಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಡೀನ್ ಮತ್ತು ಉಪ ಪ್ರಾಂಶುಪಾಲರಾದ ಪ್ರೊ. ಶರೀನಾ ಪಿ. ಅವರು, ಜೀವನದಲ್ಲಿ ನಂಬಿಕೆ ಇರಬೇಕು. ಜ್ಞಾನ ಮತ್ತು ಕೌಶಲ್ಯಗಳನ್ನು ಸದಾ ಬೆಳೆಸಬೇಕು. ಸಕಾರಾತ್ಮಕ ಮನೋ ಭಾವವೇ ಅತೀ ಅವಶ್ಯ ಎಂದರು. ಸಮಾಜ ವಿಜ್ಞಾನ ಮತ್ತು ಮಾನವಿಕ ವಿಭಾಗದ ಡೀನ್ ಮತ್ತು ವಿಭಾಗದ ಮುಖ್ಯಸ್ಥರಾದ ಡಾ. ವಸಂತ್ ಕುಮಾರ್, ಈ ಸಂದರ್ಭದಲ್ಲಿ ಬಿಡುಗಡೆಗೊಂಡ ಕಾಲೇಜಿನ ಸಂಶೋಧನ ಪತ್ರಿಕೆ, 'ಮಾರ್ದನಿ' ಪ್ರಥಮ ಸಂಚಿಕೆಯ ಕುರಿತು ಮಾತಾಡಿದರು.
ಉಪ ಪ್ರಾಂಶುಪಾಲರು ನಾರಾಯಣ್ ಸುಕುಮಾರ್ ಎ., ಕಾರ್ಯಕ್ರಮದ ಸಂಯೋಜಕರು ಹಾಗೂ ಭಾಷಾ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶಾಲಿನಿ ಸಿಕ್ವೇರಾ ಉಪಸ್ಥಿತರಿದ್ದರು.
ಸಹ ಪ್ರಾಧ್ಯಾಪಕ ಡಾ. ದಿನಕರ ಪಚ್ಚನಾಡಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಶ್ರೀ ನಿಯಾಝ್ ಪಿ. ವಂದಿಸಿ ದರು. ಬಿಸಿಎ ವಿದ್ಯಾರ್ಥಿ ಆಯಿಷಾ ನಿರೂಪಿಸಿದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾರ್ಥಿಗಳಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.