×
Ad

ಮಾ. 16ರಂದು ‘ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ’ ಕಾಲ್ನಡಿಗೆ ಜಾಥ

Update: 2025-03-12 17:49 IST

ಮಂಗಳೂರು, ಮಾ.12: ಮುಡಿಪುವಿನ ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರದ ಬೆಳ್ಳಿ ಹಬ್ಬದ ಪ್ರಯುಕ್ತ ‘ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ’ ಕಾಲ್ನಡಿಗೆ ಜಾಥ ಮಾ.16 ರಂದು ನಡೆಯಲಿದೆ.

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್, ದಕ್ಷಿಣ ವಲಯದ ಮುಂದಾಳತ್ವದಲ್ಲಿ ಮಂಗಳೂರು ದಕ್ಷಿಣ ವಲಯದ ಎಲ್ಲಾ ಚರ್ಚಿನ ಧರ್ಮಗುರುಗಳು, ಧರ್ಮಭಗಿನಿಯರು, ಪಾಲನಾ ಮಂಡಳಿಗಳು, ವಿವಿಧ ಸಂಘ ಸಂಸ್ಥೆಗಳು, ಕಥೊಲಿಕ್ ವಿದ್ಯಾಸಂಸ್ಥೆಗಳು ಹಾಗೂ 21 ಆಯೋಗದ ಸಹಭಾಗಿತ್ವದಲ್ಲಿ ಈ ಜಾಥಾ ನಡೆಲಿದೆ ಎಂದು ಜಾಥಾದ ಸಂಚಾಲಕ ಆಲ್ವಿನ್ ಡಿಸೋಜಾ ಪಾನೀರ್ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಮಧ್ಯಾಹ್ನ 3 ಗಂಟೆಗೆ ಕೋಟೆಕಾರು ಗ್ರಾಮದ ದಯಾಮಾತಾ ದೇವಾಲಯದ ಪಾನೀರ್‌ನಿಂದ ಆರಂಭ ಗೊಳ್ಳಲಿದ್ದು, ದೇರಳಕಟ್ಟೆ, ನಾಟೆಕಲ್ ಮಾರ್ಗವಾಗಿಮುಡಿಪು ಸಂತ ಜೋಸೆಫ್ ವಾಜ್ ಅವರ ಪುಣ್ಯಕ್ಷೇತ್ರ ದಲ್ಲಿ ಕೊನೆಗೊಳ್ಳಲಿದೆ. ವಂ. ಫಾ. ವಿಕ್ಟರ್ ಡಿಮೆಲ್ಲೊ ಅವರು ಉದ್ಘಾಟಿಸಲಿದ್ದಾರೆ. ವಿಶ್ರಾಂತ ಬಿಷಪ್ ಅ.ವಂ. ಡಾ. ಅಲೋಶಿಯಸ್ ಪಾವ್ಲ್ ಡಿ‘ಸೋಜಾ ಆಶೀರ್ವಚನ ನೀಡಲಿದ್ದಾರೆ. ಸಮಾರೋಪ ಕಾರ್ಯ ಕ್ರಮದಲ್ಲಿ ಅ.ವಂ. ಫಾ.ಅಸ್ಸಿಸಿ ರೆಬೆಲ್ಲೊ ಮತ್ತು ಫಾ. ಸಂತೋಷ್ ಮಿನೇಜಸ್ ಅವರು ಪ್ರಾರ್ಥನೆ ನೆರವೇರಿಸುವರು. ಅ.ವಂ. ಸಿಪ್ರಿಯನ್ ಪಿಂಟೊ ಅವರು ಪರಮಪ್ರಸಾದದ ಆಶೀರ್ವಚನ ನೆರವೇರಿಸುವರು. ಆಧ್ಯಾತ್ಮಿಕ ಕಾರ್ಯಕ್ರಮವಾಗಿದ್ದು, ಯೇಸುಕ್ರಿಸ್ತರು ಹುಟ್ಟಿ 2025 ವರ್ಷಗಳು (ಮಹೋತ್ಸವ) ತುಂಬಿದ ಸಂದರ್ಭದಲ್ಲಿ ಹಾಗೂ ತಪಸ್ಸು ಕಾಲದ ಪರಿವರ್ತನಾ ಜಾಥಾವಾಗಿರುತ್ತದೆ. ಈ ಜಾಥದಲ್ಲಿ ಸುಮಾರು 6000 ಮಂದಿ ಸೇರಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ದಕ್ಷಿಣ ವಲಯದ ಕಥೊಲಿಕ್ ಸಭಾದ ಅಧ್ಯಕ್ಷ ಡೋಲ್ಫಿ ಡಿಸೋಜಾ, ಘಟಕದ ಅಧ್ಯಕ್ಷ ರಜತ್ ವೇಗಸ್, ಕಾರ್ಯದರ್ಶಿ ಸಂತೋಷ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News