ಸ್ಟಾಕ್ ಟ್ರೇಡಿಂಗ್ ಹೂಡಿಕೆ: ವ್ಯಕ್ತಿಗೆ 18.53 ಲಕ್ಷ ರೂ. ವಂಚನೆಯ ಆರೋಪ; ದೂರು ದಾಖಲು
ಮಂಗಳೂರು: ಫೇಸ್ ಬುಕ್‌ನಲ್ಲಿ ಕಾಣಿಸಿಕೊಂಡ ಸ್ಟಾಕ್ ಟ್ರೇಡಿಂಗ್ ಜಾಹೀರಾತು ನೋಡಿ ಹಣ ಹೂಡಿಕೆ ಮಾಡಿದ ವ್ಯಕ್ತಿ ಯೊಬ್ಬರು 18.53 ಲ.ರೂ. ವಂಚನೆಗೊಳಗಾದ ಘಟನೆ ವರದಿಯಾಗಿದೆ.
ವಿಜಯ ಕುಮಾರ್ ವಂಚನೆಗೊಳಗಾದವರು. ಅವರು ಫೇಸ್‌ಬುಕ್‌ನಲ್ಲಿ ಸ್ಟಾಕ್ ಟ್ರೇಡಿಂಗ್ ಎಂಬ ಜಾಹೀರಾತು ನೋಡಿ ಅದರಲ್ಲಿದ್ದ ಲಿಂಕ್‌ನ ಮೂಲಕ 2013ರ ಡಿ.2ರಂದು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸೇರ್ಪಡೆಯಾಗಿದ್ದರು ಎನ್ನಲಾಗಿದೆ.
ಗ್ರೂಪ್‌ನ ಚೀಫ್ ಅಡ್ಮಿನ್ ಅಗಿದ್ದ ಅಮಿತ್ ಶಾ ಎಂಬಾತ ಪ್ರತಿ ದಿನ ಆನ್‌ಲೈನ್ ವೀಡಿಯೋ ಕ್ಲಾಸ್ ಮೂಲಕ ಸ್ಟಾಕ್ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿ ದುಪ್ಪಟ್ಟು ಮಾಡುವ ಬಗ್ಗೆ ವಿವರಿಸುತ್ತಿರುವುದನ್ನು ನಿಜವೆಂದು ಭಾವಿಸಿದ ವಿಜಯ ಅವರು ಅದನ್ನು ಸತ್ಯವೆಂದು ಭಾವಿಸಿ ಹಣ ತೊಡಗಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
2024ರ ಜ.11ರಿಂದ ಫೆ.5ರವರೆಗೆ ಹಂತ ಹಂತವಾಗಿ ಒಟ್ಟು 18.53 ಲ.ರೂ.ಗಳನ್ನು ಪಾವತಿಸಿದ್ದರು. ಅದನ್ನು ಹಿಂಪಡೆ ಯಲು ಸ್ಟಾಕ್ ಟ್ರೇಡಿಂಗ್ ಕಂಪೆನಿಯ ಕಸ್ಟಮರ್ ಕೇರ್‌ರವರನ್ನು ಸಂರ್ಪಿಕಿಸಿದಾಗ ಶೇ.40 ಕಮಿಷನ್ ಆಗಿ ನೀಡುವಂತೆ ಹಾಗೂ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದರು ಎನ್ನಲಾಗಿದೆ.
ಆಗ ಅನುಮಾನ ಬಂದ ವಿಜಯ ಕುಮಾರ್ ಅವರು ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಯಿತು. ಈ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.