ಮೇ 23ರಿಂದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ರ ಆಂಡ್ ನೇರ್ಚೆ
ಉಳ್ಳಾಲ: ನರಿಂಗಾನದ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಆಶ್ರಯದಲ್ಲಿ ಮರ್ಹೂಂ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅವರ ಆರನೇ ಆಂಡ್ ನೇರ್ಚೆ ಹಾಗೂ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮವು ಮೇ 23ರಿಂದ 25ರವರೆಗೆ ಜರುಗಲಿದೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಕನ್ವೀನರ್ ಕೆಎಂಕೆ ಮಂಜನಾಡಿ ತಿಳಸಿದ್ದಾರೆ.
ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 23ರಂದು ಜುಮಾ ನಮಾಝ್ ಬಳಿಕ ಧ್ವಜಾರೋಹಣ ನೆರವೇರುವದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ರಾತ್ರಿ ಏಳು ಗಂಟೆಗೆ ಖತಮುಲ್ ಕುರ್ ಆನ್, ದ್ಸಿಕ್ರ್, ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ ಸೈಯದ್ ಅಬ್ದುರ್ರಹ್ಮಾನ್ ಮಸ್ಊದ್ ತಂಙಳ್ ನೇತೃತ್ವದಲ್ಲಿ ನಡೆಯಲಿದೆ ಎಂದರು.
ಮೇ 24ರಂದು ರಾತ್ರಿ ಏಳು ಗಂಟೆಗೆ ಅನುಸ್ಮರಣಾ ಸಂಗಮ, ರಿಫಾಯಿ ದಫ್ ರಾತೀಬ್ ನಡೆಯಲಿದ್ದು, ಶೈಖುನಾ ಮಹಮೂದುಲ್ ಫೈಝಿ ವಾಲೆಮುಂಡೋವು ದುಆ ನೆರವೇರಿಸಲಿದ್ದಾರೆ. ಸೈಯದ್ ಆಟಕ್ಕೋಯ ತಂಙಳ್ ಕುಂಬೋಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಾ.ಕೋಯ ಕಾಪಾಡ್ ಮತ್ತು ಸಂಗಡಿಗರ ನೇತೃತ್ವದಲ್ಲಿ ದಫ್ ರಾತೀಬ್ ಜರುಗಲಿದೆ ಎಂದರು.
ಮೇ25 ರಂದು ಸಂಜೆ 4:30ಕ್ಕೆ ಪ್ರವಾಸಿ ಸಂಗಮ, ರಾತ್ರಿ ಏಳು ಗಂಟೆಗೆ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭವನ್ನು ಉಡುಪಿ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟಿಸಲಿದ್ದಾರೆ. ಇಸ್ಮಾಯೀಲ್ ತಂಙಳ್ ಅಲ್ ಹಾದಿ ತಂಙಳ್ ಉಜಿರೆ ದುಆ ನೆರವೇರಿಸಲಿದ್ದಾರೆ.
ಸ್ಪೀಕರ್ ಯು.ಟಿ.ಖಾದರ್, ಯೆನೆಪೊಯ ವಿವಿ ಕುಲಪತಿ ಅಬ್ದುಲ್ಲ ಕುಂಞಿ, ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್, ಡಾ.ಹುಸೈನ್ ಸಖಾಫಿ ಚುಳ್ಳಿಕೋಡ್, ನೌಫಲ್ ಸಖಾಫಿ ಕಳಸ ಭಾಗವಹಿಸಲಿದ್ದಾರೆ ಎಂದರು.