ಡಿ. 23ರಂದು ‘ಅಸ್ಮಿತಾಯ್’ ಸಿನೆಮಾ 100ರ ಸಂಭ್ರಮ
ಮಂಗಳೂರು, ಡಿ.2: ಮಾಂಡ್ ಸೊಭಾಣ್ ನಿರ್ಮಾಣದ ‘ಅಸ್ಮಿತಾಯ್’ ಕೊಂಕಣಿ ಚಲನಚಿತ್ರವು ಡಿ.23ರಂದು 100ನೇ ದಿನದ ಮೈಲಿಗಲ್ಲನ್ನು ಸಾಧಿಸಲಿದ್ದು, ಅಂದು ಸಂಜೆ 4ಕ್ಕೆ ನಗರದ ಬಿಜೈನ ಭಾರತ್ ಸಿನಿಮಾದಲ್ಲಿ ಶತದಿನಾಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ಚಿತ್ರದ ಕತೆಗಾರ ಎರಿಕ್ ಒಝೇರಿಯೊ ತಿಳಿಸಿದರು.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮುಂಬೈನ ಉದ್ಯಮಿ ಆಲ್ಬರ್ಟ್ ಡಬ್ಲ್ಯು ಡಿಸೋಜ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಸಿನಿಮಾದ ನಟ-ನಿರ್ದೇಶಕ ವರ್ಗವನ್ನು ಗೌರವಿಸಲಿದ್ದಾರೆ. ‘ಅಸ್ಮಿತಾಯ್’ ಚಿತ್ರ ಸೆ.15 ರಂದು ತೆರೆ ಕಂಡಿದ್ದು, ಇದುವರೆಗೆ ಮಂಗಳೂರು, ಉಡುಪಿ, ಉತ್ತರ ಕನ್ನಡ, ಗೋವಾ, ಮೈಸೂರು, ಬೆಂಗಳೂರು, ಕೇರಳ, ಅಹ್ಮದಾಬಾದ್, ಮುಂಬಯಿ ಹಾಗೂ ಯುಎಇ, ಕುವೈಟ್, ಬಹರೇಯ್ನ್, ಸೌದಿ ಅರೇಬಿಯಾ, ಕತರ್, ಒಮನ್, ಇಂಗ್ಲೆಂಡ್, ಐಲೆರ್ಂಡ್, ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್, ಕೆನಡಾ, ಅಮೇರಿಕಾ, ಜರ್ಮನಿ ಹೀಗೆ 14 ದೇಶಗಳಲ್ಲಿ ಸುಮಾರು 490 ಕ್ಕೂ ಮಿಕ್ಕಿ ಪ್ರದರ್ಶನ ನಡೆದಿ ದೆ. ವಾಷಿಂಗ್ಟನ್ ಡಿಸಿಯ ಸೌಥ್ ಏಯಾ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದೆ ಕೊಂಕಣಿ ಜನರ ಅಸ್ಮಿತೆಯ ಹುಡುಕಾಟದ ಎಳೆಯೊಂದಿಗೆ ಸಾಗುವ ಕತೆಯು ಗೋವಾದಿಂದ ವಲಸೆ, ಕೊಂಕಣಿಯ ಶ್ರೀಮಂತ ಜನಪದ ಪರಂಪರೆಯ ದೃಶ್ಯ ವೈಭವವನ್ನು ನವಿರಾದ ಪ್ರೇಮಕತೆಯೊಂದಿಗೆ ತೋರಿಸುತ್ತದೆ. ಕರಾವಳಿ ಪ್ರಬುದ್ಧ ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಲುವಿಸ್ ಜೆ ಪಿಂಟೊ, ಕಾರ್ಯನಿರ್ವಾಹಕ ನಿರ್ಮಾಪಕ ನವೀನ್ ಲೋಬೊ, ನಟರಾದ ಅಶ್ವಿನ್ ಡಿ ಕೋಸ್ತಾ, ವೆನ್ಸಿಟಾ ಡಾಯಸ್, ಚಿತ್ರತಂಡದ ಕಿಶೋರ್ ಫರ್ನಾಂಡೀಸ್, ಐರಿನ್ ರೆಬೆಲ್ಲೊ ಉಪಸ್ಥಿತರಿದ್ದರು.