×
Ad

ಅಲ್ ಮದೀನ ವಿದ್ಯಾರ್ಥಿಗಳ ಕಲೋತ್ಸವ ʼಗುಲ್ಶನ್-25ʼ ಸಮಾಪ್ತಿ

Update: 2025-09-02 22:20 IST

ಮಂಗಳೂರು, ಸೆ.2: ಮಂಜನಾಡಿಯ ಅಲ್ ಮದೀನದ ಹಿಬ್ರ್ ಹಾಲ್ ಆಫ್ ಎಕ್ಸಲೆನ್ಸ್ ಶೈಕ್ಷಣಿಕ ವಿಭಾಗದ ವಿದ್ಯಾರ್ಥಿಗಳ ಸಾಹಿತ್ಯ ಹಬ್ಬ 6ನೇ ಆವೃತ್ತಿಯ ಗುಲ್ಶನ್-25 ಇತ್ತೀಚೆಗೆ ನಡೆಯಿತು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಸಯ್ಯಿದ್ ಉವೈಸ್ ಅಸ್ಸಖಾಫ್ ತಂಙಳ್ ದಿಕ್ಸೂಚಿ ಭಾಷಣ ಮಾಡಿದರು. ಗುಲ್ಶನ್ ಚೀಫ್ ಪಾಟ್ರನ್, ಪ್ರಾಧ್ಯಾಪಕ ಅಬ್ದುಸ್ಸಲಾಂ ಅಹ್ಸನಿ ಉದ್ಘಾಟಿಸಿದರು. ಗುಲ್ಶನ್ ಕಲೋತ್ಸವದ ಕನ್ವೀನರ್ ಜುರೈಜ್ ವಿರಾಜಪೇಟೆ ಸ್ವಾಗತಿಸಿದರು. ಹಾಜಿ ಎನ್. ಎಸ್. ಕರೀಂ, ಕುಂಞಿ ಬಾವ ಹಾಜಿ ಕಲ್ಕಟ್ಟ, ಸರ್ಫರಾಝ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ನಡೆದ ಸಾಹಿತ್ಯಗೋಷ್ಠಿಯಲ್ಲಿ ಸಾಹಿತಿ, ಅಂಕಣಕಾರ ಯೋಗೇಶ್ ಮಾಸ್ಟರ್ ವಿಷಯ ಮಂಡಿಸಿದರು. ಕೇರಳದ ಪಾಲಕ್ಕಾಡಿನ ಗಾಯಕರಿಂದ ಇಶಲ್ ನೈಟ್ ಪ್ರಕೀರ್ತನಾ ಗಾಯನ ನಡೆಯಿತು.

ದ್ವಿತೀಯ ಮತ್ತು ತೃತೀಯ ದಿನಗಳಲ್ಲಿ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನ ಹಾಗೂ ಪ್ರತಿಭಾ ಸ್ಪರ್ಧೆಗಳು ನಡೆದವು. ವಿವಿಧ ಭಾಷೆ, ವಿಷಯಗಳಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಿಗೆ ಹಿಜ್ರಾ, ಇಸ್ರಾ ಮತ್ತು ಫತ್ಹ್ ಗುಂಪುಗಳಲ್ಲಿ ನೂರಕ್ಕೂಕ್ಕೂ ಹೆಚ್ಚು ವಿಷಯಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಕಲೋತ್ಸವದ ಭಾಗವಾಗಿ ಹಳೆ ವಿದ್ಯಾರ್ಥಿಗಳ ಸಂಗಮ ಶುರಫಾ ನಡೆಯಿತು. ಇದರಲ್ಲಿ ಸಂಸ್ಥೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಅಧ್ಯಾಪಕರುಗಳಾದ ಯೂನುಸ್ ಅಹ್ಸನಿ, ಮಾಜಿದ್ ಅಹ್ಸನಿ, ಝೈನುಲ್ ಆಬಿದ್ ಸಖಾಫಿ ಮಾಗುಂಡಿ ಭಾಗವಹಿಸಿದರು.

ಫತ್ಹ್ ತಂಡ 674 ಅಂಕಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ ಹಾಗೂ ಹಿಜ್ರಾ ತಂಡ 650 ಅಂಕ ಗಳೊಂದಿಗೆ ರನ್ನರ್ಸ್ ಆಪ್ ಗಳಿಸಿತು. ಸೀನಿಯರ್ ವಿಭಾಗದಲ್ಲಿ ಫವಾಝ್ ಪಾನೇಲ ಹಾಗೂ ಜೂನಿಯರ್ ವಿಭಾಗದಲ್ಲಿ ಸಫ್ವಾನ್ ಮಲಾರ್ ವೈಯಕ್ತಿಕ ಚಾಂಪಿಯನ್‌ಗಳಾಗಿ ಮೂಡಿಬಂದರು.

ತೀರ್ಪುಗಾರರಾಗಿ ತಸ್ಲೀಮ್ ನೂರಾನಿ ಮೊಂಟೆಪದವು, ಅಮೀನ್ ಹಿಮಮಿ ಸಖಾಫಿ ಕೊಳಕೆ, ಸ್ವಾದಿಕ್ ಮುಈನಿ ಬೆಳಾಲು, ಅಬ್ದುಲ್ಲ ಮಲ್ಹರಿ ಸಖಾಫಿ ಸಹಕರಿಸಿದರು. ರಾಶಿದ್ ಮದ್ದಡ್ಕ, ಸಮದ್ ಮರ್ಝೂಕಿ ಉದ್ಘೋಷಕರಾಗಿ ಸಹಕರಿಸಿದರು.

ರವಿವಾರ ರಾತ್ರಿ ನಡೆದ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಗುಲ್ಶನ್ ಚೆಯರ್‌ಮ್ಯಾನ್ ಅಬ್ದುರ‌್ರಹಾನ್ ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು. ಮುಝಮ್ಮಿಲ್ ಲಾಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News