×
Ad

ಡಿ 25: ಮೊಗವೀರಪಟ್ಟಣದ ಮಾರುತಿ ಜನಸೇವಾ ಸಂಘ, ಯುವಕ ಮಂಡಲದ ವಾರ್ಷಿಕೋತ್ಸವ

Update: 2025-12-22 15:23 IST

ಮಂಗಳೂರು: ಉಳ್ಳಾಲ ಮೊಗವೀರಪಟ್ಣದ ಮಾರುತಿ ಜನಸೇವಾ ಸಂಘ ಹಾಗೂ ಮಾರುತಿ ಯುವಕ ಮಂಡಲದ 40ನೇ ವರ್ಷಾಚರಣೆ ‘ಮಾರುತಿ ಮಾಣಿಕ್ಯ ಮಹೋತ್ಸವ -2025' ಇದರ ಸಮಾರೋಪ ಸಮಾರಂಭ ಡಿ.25ರಂದು ಅಪರಾಹ್ನ 3ಕ್ಕೆ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಮಾರುತಿ ಜನಸೇವಾ ಸಂಘ ಮತ್ತು ಮಾರುತಿ ಯುವಕ ಮಂಡಲದ ಗೌರವಾಧ್ಯಕ್ಷ ವರದರಾಜ್ ಬಂಗೇರ ಹೇಳಿದ್ದಾರೆ.

ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 40 ನೇ ವರ್ಷಾಚರಣೆಯ ಪ್ರಯುಕ್ತ ಸುಮಾರು 40ಕ್ಕೂ ಹೆಚ್ಚು ಕಾರ್ಯಕ್ರಮಗಳು 2025 ಜನವರಿಯಿಂದ ಡಿಸೆಂಬರ್ ವರೆಗೆ ಹಮ್ಮಿಕೊಂಡಿದ್ದು, ಡಿ. 25ರಂದು ನಡೆಯುವ ಸಮಾರೋಪ ಸಂಭ್ರಮ ಜರುಗಲಿದೆ. ವಿಶ್ವಕಪ್ ಚಿನ್ನದ ಪದಕ ವಿಜೇತ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ, ತೆಂಕುತಿಟ್ಟಿನ ಪ್ರಾತಿನಿಧಿಕ ಯಕ್ಷಗಾನ ರಾಜ ಹಾಸ್ಯಗಾರ ರವಿಶಂಕರ ವಳಕುಂಜ, 2024 -25ನೇ ಸಾಲಿನ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ರ್ಯಾಂಕ್ ವಿಜೇತೆ ದೀಪಾಶ್ರೀ ಎಸ್., ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ ಭರತನಾಟ್ಯ ಕಲಾವಿದೆ ರೆಮೋನಾ ಇವೆಟ್ ಪಿರೇರಾ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರಮೀಳಾ ದೀಪಕ್ ಪೆರ್ಮುದೆ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಗಸ್ವರ ಹಾಗೂ ಸ್ಯಾಕ್ಸೋಫೋನ್ ಕಲಾವಿದ ಡಾ. ಶಮ್ಮಿ ಗಫೂರ್ ಪಡುಬಿದ್ರಿ ಅವರಿಗೆ ಮಾರುತಿ ಸಾಧಕ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಆರ್ಥಿಕವಾಗಿ ಹಿಂದುಳಿದ ಎರಡು ಕುಟುಂಬಗಳಿಗೆ ಮನೆ ಹಸ್ತಾಂತರ, ಗೌರವ ಸಮರ್ಪಣೆ, ಕರಾವಳೀ ಆಹಾರ ಮೇಳ, ಸಾಂಸ್ಕೃತಿಕ ವೈಭವದೊಂದಿಗೆ 40ನೇ ವರ್ಷಾಚರಣೆಯ ಸಮಾರೋಪ ಸಂಭ್ರಮ ಸಮಾಪನಗೊಳ್ಳಲಿದೆ ಎಂದು ವಿವರಿಸಿದರು.

ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಂಸದ ಬ್ರಿಜೇಶ್ ಚೌಟ, ಉಡುಪಿಯ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಜನತಾ ಫಿಶ್ ಮೀಲ್ ಆಂಡ್ ಫುಡ್ ಪ್ರಾಡಕ್ಷನ್ ನ ಆಡಳಿತ ನಿರ್ದೇಶಕ ಆನಂದ ಸಿ. ಕುಂದರ್, ಉದ್ಯಮಿ ಸಂತೋಷ್ ಸುವರ್ಣ ಕೋಡಿಕಲ್, ಶಾಸಕರಾದ ವೇದವ್ಯಾಸ ಕಾಮತ್, ಯಶ್ಪಾಲ್ ಎ. ಸುವರ್ಣ, ಕರ್ನಾಟಕ ರಾಜ್ಯ ಅಲೈಡ್ ಹೆಲ್ತ್ ಕೌನ್ಸಿಲ್ ಅಧ್ಯಕ್ಷ ಯು.ಟಿ.ಇಫ್ತಿಕಾರ್ ಅಲಿ, ಬಹರೈನ್ ನ ಮೆಟಲ್ ಗ್ರೂಪ್ ಆಫ್ ಕಂಪೆನೀಸ್ ನ ಅಬ್ದುಲ್ ರಝಾಕ್, ಮೊಗವೀರ್ಸ್ ಬಹರೈನ್ ನ ಅಧ್ಯಕ್ಷೆ ಶಿಲ್ಪಾ ಶಮಿತ್ ಕುಂದರ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಪಾಧ್ಯಕ್ಷ ಮೋಹನ್ ಬೆಂಗ್ರೆ, ಯಚ್.ಎಸ್. ನಿಸಾರ್, ಉದ್ಯಮಿ ಹಾಗೂ ಮಾರುತಿ ಕ್ರಿಕೆಟರ್ಸ್ ಮಾಜಿ ಅಧ್ಯಕ್ಷ ಎಚ್.ಎಸ್. ನಿಸಾರ್, ಮತ್ಸ್ಯೋದ್ಯಮಿ ಉಮೇಶ್ ಟಿ. ಕರ್ಕೇರ ಮತ್ಸ್ಯರಾಜ್ ಕುಳಾಯಿ, ಎವರೆಸ್ಟ್ ಸೀ ಫುಡ್ಸ್ ಪ್ರೈ.ಲಿ. ಆಡಳಿತ ನಿರ್ದೇಶಕ ಸಿಂಧೂರಾಮ್ ಎ. ಪುತ್ರನ್, ಕಾಂಚನ ಹುಂಡೈ ಆಡಳಿತ ನಿರ್ದೇಶಕ ಪ್ರಸಾದ್ರಾಜ್ ಕಾಂಚನ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾರುತಿ ಜನಸೇವಾ ಸಂಘ ಮತ್ತು ಮಾರುತಿ ಯುವಕ ಮಂಡಲದ ಅಧ್ಯಕ್ಷ ಸಂದೀಪ್ ಪುತ್ರನ್, ಪ್ರಧಾನ ಸಂಚಾಲಕ ಸುಧೀರ್ ವಿ. ಅಮೀನ್, ಪ್ರ. ಕಾರ್ತದರ್ಶಿ ಕಪಿಲ್ ಎಸ್. ಬಂಗೇರ, ಕ್ರೀಡಾ ಕಾರ್ಯದರ್ಶಿ ಮಹೇಶ್ ಸಾಲ್ಯಾನ್, ಸದಸ್ಯ ವಾಸುದೇವ ಕರ್ಕೇರ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News