×
Ad

ಕೇಪು ಕೋಳಿ ಅಂಕಕ್ಕೆ ತಡೆ; ರಾಜ್ಯ ಸರಕಾರದಿಂದ ತುಘಲಕ್ ಶಾಹಿ ಆಡಳಿತ: ಸಂಸದ ಕ್ಯಾ.ಬ್ರಿಜೇಶ್ ಚೌಟ ಆರೋಪ

Update: 2025-12-22 17:09 IST

ಮಂಗಳೂರು, ಡಿ.22: ಕೇಪು ಉಳ್ಳಾಲ್ತಿ ಕ್ಷೇತ್ರದಲ್ಲಿ 800 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕೋಳಿ ಅಂಕದಲ್ಲಿ ಜೂಜು, ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪದಲ್ಲಿ ಪೊಲೀಸರ ಮೂಲಕ ತಡೆಯಲು ಪ್ರಯತ್ನಿಸಿರುವ ರಾಜ್ಯದ ಕಾಂಗ್ರೆಸ್ ಸರಕಾರ ತುಘಲಕ್ ಶಾಹಿ ಆಡಳಿತ ನಡೆಸುತ್ತಿದೆ ಎಂದು ಸಂಸದ ಕ್ಯಾ. ಬ್ರಿಜೇಶ್‌ಚೌಟ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಶಾಸಕರ ಉಪಸ್ಥಿತಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿದರೆ ಸಹಿಸಲಾಗದು ಎಂದರು.

ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತ ಬಂದ ಬಳಿಕ ನಿರಂತರವಾಗಿ ಹಿಂದೂ ವಿರೋಧಿ ನೀತಿಗಳನ್ನು ಅಳವಡಿಸಿಕೊಂಡು ಬರಲಾಗುತ್ತಿದೆ. ಹಿಂದೂಗಳ ನಂಬಿಕೆ, ಹಿಂದು ಕಾರ್ಯಕರ್ತರ ನಿಯಂತ್ರಣ, ಹಿಂದೂ ಸಂಘಟನೆಗಳನ್ನು ದಮನಿಸುವ ಕೆಲಸ ನಡೆಯುತ್ತಿದ್ದು, ಇದೀಗ ಕೋಳಿ ಅಂಕ, ಯಕ್ಷಗಾನ, ಕಂಬಳದ ಸಂದರ್ಭವೂ ಪ್ರಕರಣ ದಾಖಲಿಸುವ ಕೃತ್ಯ ನಡೆಯುತ್ತಿರುವುದು ನಾಚಿಕೆಗೇಡು ಎಂದರು.

ಧಾರ್ಮಿಕ ನಂಬಿಕೆಗಳಿಗೆ ತೊಂದರೆಯಾಗುವ ಯಾವುದೇ ಕೃತ್ಯ ನಡೆಯುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಭೆಯಲ್ಲಿ ಹೇಳಿಕೆ ನೀಡಿದ ಹೊರತಾಗಿಯೂ ಇಂತಹ ಕೃತ್ಯಗಳು ನಡೆಯುತ್ತಿವೆ. ಇನ್ನಾದರೂ ಇಂತಹ ದಮನ ಪ್ರಕ್ರಿಯೆಗಳ ಬಗ್ಗೆ ಉಸ್ತುವಾರಿ ಸಚಿವರು ಗಂಭೀರವಾಗಿ ಪರಿಗಣಿಸಬೇಕು. ಇನ್ನು ಅಲ್ಲಲ್ಲಿ ಜಾತ್ರಾಮಹೋತ್ಸವ, ಕೋಲ, ನೇಮ ನಡೆಯಲಿದ್ದು, ಇಂತಹ ಕುಂಟು ನೆಪವೊಡ್ಡಿ ಹಿಂದೂ ನಂಬಿಕೆಗೆ ಘಾಸಿಗೊಳಿಸಿದರೆ, ಸುಮ್ಮನಿರುವುದಿಲ್ಲ. ಕೇಪು ಉಳ್ಳಾಲ್ತಿ ಕೋಳಿ ಅಂಕ ಪ್ರಕರಣದ ಕುರಿತಂತೆಯೂ ಕಾನೂನಿನ ಮೂಲಕ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಕೇಪು ಕ್ಷೇತ್ರದಲಲ್ಲಿ ಜೂಜಿನ ವ್ಯವಸ್ಥೆ ಇಲ್ಲ. ಇಷ್ಟು ವರ್ಷಗಳಿಂದ ಅಲ್ಲಿ ನಡೆಯುತ್ತಿದ್ದ ಕೋಳಿ ಅಂಕವನ್ನು ಈವರ್ಷ ಹಠಾತ್ತಾಗಿ ತಡೆಯಲು ಪ್ರಯತ್ನಿಸಿರುವುದಲ್ಲದೆ, ಪಕ್ಷದ ಜಿಲ್ಲಾಧ್ಯಕ್ಷರ ಮೇಲೂ ಪ್ರಾಣಿ ಹಿಂಸೆ ಪ್ರಕರಣ ದಾಖಲಾಗಿದೆ. ಹಬ್ಬ ಹರಿದಿನಗಳಿಗೆ ಸಂಬಂಧಿಸಿ ಅಲ್ಲಲ್ಲಿ ಕುರಿ ಕೋಳಿ ಬಲಿ ನೀಡುವ ಪದ್ಧತಿ ಇದ್ದು, ಅದನ್ನು ನಿಲ್ಲಿಸುವ ತಾಕತ್ತು ಸರಕಾರ ಅಥವಾ ಪೊಲೀಸ್ ಅಧಿಕಾರಿಗಳಿಗೆ ಇದೆಯೇ ಎಂದು ಪ್ರಶ್ನಿಸಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ನಾವೂ ಈ ಹಿಂದೆ ಮೂರು ವರ್ಷ ಸರಕಾರ ನಡೆಸಿದ್ದೇವೆ. ನಮ್ಮ ಅವಧಿಯಲ್ಲಿ ಒಂದೇ ಒಂದು ಇಂತಹ ಘಟನೆ ನಡೆದಿಲ್ಲ. ಕಾಂಗ್ರೆಸ್ ಸರಕಾರಕ್ಕೆ ಅಧಿಕಾರಿಗಳನ್ನು ಸೇರಿಸಿ ಇಂತಹ ತಪ್ಪುಗಳನ್ನು ಸರಿಪಡಿಸಲು ಆಗುವುದಿಲ್ಲ ಎಂದಾದರೆ ಇದು ಕೇವಲ ನಮ್ಮ ಧಾರ್ಮಿಕ ಭಾನನೆಗಳಿಗೆ ಹೊಡೆತ ನೀಡುವ ವಿಚಾರ. ಕೋಳಿ ಅಂಕಕ್ಕೆ ಸಾವಿರಾರು ಜನ ಹೋಗುತ್ತಾರೆ. ಅವೆರಲ್ಲರ ಮೇಲೆ ಪ್ರಕರಣ ದಾಖಲಿಸಲು ಪೆನ್ನು ಪುಸ್ತಕ ಇದೆಯೇ ಎಂದು ಪ್ರಶ್ನಿಸಿದರು.

ಮಂಗಳೂರಿನಲ್ಲಿ 50ಕ್ಕೂ ಅಧಿಕ ಪ್ರಾಣಿ ವಧಾ ಕೇಂದ್ರಗಳಿವೆ. ಅಲ್ಲಿ ಯಾವ ಎಫ್‌ಐಆರ್ ಯಾಕೆ ದಾಖಲಿಸುವುದಿಲ್ಲ ಎಂದವರು ಪ್ರಶ್ನಿಸಿದರು.

ಗೋಷ್ಟಿಯಲ್ಲಿ ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ನಾಯಕರಾದ ಅರುಣ್ ಶೇಟ್, ಜಗದೀಶ್ ಆಳ್ವ, ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News