×
Ad

ದ.ಕ. ಜಿಲ್ಲೆಯ ಗಡಿಭಾಗದಲ್ಲಿ ಕೋವಿಡ್ ಪರೀಕ್ಷೆಗೆ 5 ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ನಿಯೋಜನೆ: ಡಾ. ತಿಮ್ಮಯ್ಯ

Update: 2023-12-20 19:45 IST

ಫೈಲ್‌ ಫೋಟೊ 

ಮಂಗಳೂರು: ನೆರೆಯ ರಾಜ್ಯವಾಗಿರುವ ಕೇರಳದಲ್ಲಿ ಕಂಡು ಬಂದಿರುವ ಕೊರೋನ -19 ವೈರಸ್‌ನ ಜೆಎನ್-1 ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಮುನ್ನಚ್ಚೆರಿಕೆ ವಹಿಸಲಾಗಿದ್ದು, ಜಿಲ್ಲೆಯ ಗಡಿಭಾಗದಲ್ಲಿ ತಪಾಸಣೆಗೆ ಐದು ಚೆಕ್ ಪೋಸ್ಟ್‌ ಗಳಲ್ಲಿ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದ.ಕ.ಜಿಲ್ಲೆಯಲ್ಲಿ ಕೊರೋನ -19 ವೈರಸ್‌ನ ಉಪತಳಿ ಜೆಎನ್-1 ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯ ಗಡಿಪ್ರದೇಶಗಳಾಗಿರುವ ತಲಪಾಡಿ, ಸಾರಡ್ಕ, ಸ್ವರ್ಗ(ಪಾಣಾಜೆ) , ಸುಳ್ಯ ಪದವು, ಜಾಲ್ಸೂರು ಈ ಐದು ಸ್ಥಳಗಳಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಈಗ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲೂ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕೇರಳದಲ್ಲಿ ಜೆಎನ್‌1 ತಳಿಯ 27 ಪ್ರಕರಣಗಳು ಪತ್ತೆಯಾಗಿವೆ. ಅವರಲ್ಲಿ ಇಬ್ಬರು ಗುಣಮುಖರಾಗಿದ್ದಾರೆ. 25 ಮಂದಿ ಹೋಮ್ ಐಸೊಲೇಷನ್‌ನಲ್ಲಿ ಇದ್ದಾರೆ ಎಂದು ಅಲ್ಲಿನ ಆರೋಗ್ಯ ಇಲಾಖೆಯಿಂದ ಮಾಹಿತಿ ಲಭಿಸಿದೆ ಎಂದು ತಿಳಿಸಿದರು.

ಕೇರಳದಿಂದ ಬರುವ ವಿದ್ಯಾರ್ಥಿಗಳಲ್ಲಿ ಶೀತ, ನೆಗಡಿ, ಜ್ವರ ಅನಾರೋಗ್ಯದ ಲಕ್ಷಣಗಳು ಇದ್ದರೆ ಅವರನ್ನು ತಪಾಸಣೆಗೆ ಒಳಪಡಿಸುವಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಪತ್ರ ಬರೆಯಲಾಗುತ್ತದೆ. ಜಿಲ್ಲೆಯಲ್ಲಿ ಪ್ರತಿನಿತ್ಯ 100 ರ್ಯಾಪಿಡ್ ಟೆಸ್ಟ್, 221 ಆರ್‌ಟಿಪಿಸಿಆರ್ ಟೆಸ್ಟ್ ಸೇರಿದಂತೆ ಒಟ್ಟು 321 ಜನರನ್ನು ತಪಾಸಣೆಗೆ ಒಳಪಡಿಸುವಂತೆ ಗುರಿ ನಿಗದಿಯಾಗಿದೆ. 100 ಕಿಟ್‌ಗಳನ್ನು ತಾಲೂಕು ಆಸ್ಪತ್ರೆಗಳಿಗೆ ಒದಗಿಲಾಗಿದೆ.

ಕೇರಳ ರಾಜ್ಯದ ಜನರು ತಮ್ಮ ದೈನಂದಿನ ವ್ಯವಹಾರ ಹಾಗೂ ಆರೋಗ್ಯ ಸೇವೆಗೆ ಮಂಗಳೂರು ನಗರವನ್ನು ಅವಲಂಭಿ ಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಸರಕಾರದ ಹಿರಿಯ ಅಧಿಕಾರಿಗಳು ಮಂಗಳವಾರ ವಿಡಿಯೊ ಕಾನ್ಫರೆನ್ಸ್ ನಡೆಸಿ ಅಗತ್ಯ ಸಲಹೆಗಳನ್ನು ನೀಡಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ನೇತೃತ್ವದಲ್ಲಿ ಬುಧವಾರ ಇಲ್ಲಿ ಸಭೆ ನಡೆದಿದ್ದು, ಅಗತ್ಯದ ತಯಾರಿಯ ಬಗ್ಗೆ ಚರ್ಚಿಸಲಾಗಿದೆ ಎಂದು ವಿವರಿಸಿದರು.

‘‘ಕೇರಳದ ಪವಿತ್ರ ಕ್ಷೇತ್ರ ಶಬರಿಮಲೈ ಯಾತ್ರಾರ್ಥಿಗಳಲ್ಲಿ ಕೋವಿಡ್ ರೋಗ ಲಕ್ಷಣಗಳು ಇದ್ದರೆ ಮಾತ್ರ ತಪಾಸಣೆ ನಡೆಸಲಾಗುವುದು".

-ಡಾ. ಎಚ್.ಆರ್. ತಿಮ್ಮಯ್ಯ

ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News