×
Ad

ಜ.1ರಂದು ಶ್ರೀರಾಮಕೃಷ್ಣ ಮಠದಲ್ಲಿ ‘ಕಲ್ಪತರು ಉತ್ಸವ’

Update: 2023-12-31 20:19 IST

ಮಂಗಳೂರು‌: ಶ್ರೀರಾಮಕೃಷ್ಣ ಮಠದಲ್ಲಿ ‘ಕಲ್ಪತರು ಉತ್ಸವ’ ಜ.1ರಂದು ನಡೆಯಲಿದೆ. ಈ ಕಲ್ಪತರು ದಿನದ ಶುಭ ಸಂದರ್ಭದಲ್ಲಿ ಭಜನಾ ಸಂಗಮ ಎಂಬ ವಿನೂತನಕಾರ್ಯಕ್ರಮದೊಂದಿಗೆ 2024ನೇ ಸಾಲಿನ ಭಜನ್ ಸಂಧ್ಯಾ ಸರಣಿಯ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದ ಅಂಗವಾಗಿಸಂಜೆ 4:30ಕ್ಕೆ ಸರಿಯಾಗಿ ದೀನ್‌ರಾಜ್ ಕಳವಾರು ನೇತೃತ್ವದಲ್ಲಿ 500ಕ್ಕೂ ಹೆಚ್ಚಿನ ಮಕ್ಕಳಿಂದ ಮಂಗಳಾದೇವಿ ವೃತ್ತದಿಂದ ರಾಮಕೃಷ್ಣ ಮಠದವರೆಗೆ ಕುಣಿತ ಭಜನೆಯೊಂದಿಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ. ಭಜನಾ ಶೋಭಾಯಾತ್ರೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಹರಿನಾರಾಯಣ ಅಸ್ರಣ್ಣ ಚಾಲನೆ ನೀಡಲಿದ್ದಾರೆ.

ಸಂಜೆ 6 ಗಂಟೆಗೆ 2024 ಸಾಲಿನ ಭಜನ್ ಸಂಧ್ಯಾಕಾರ್ಯಕ್ರಮದ ಉದ್ಘಾಟನೆಯು ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ದಿವ್ಯಸಾನಿಧ್ಯ ವಹಿಸಲಿದ್ದಾರೆ. ಬೆಂಗಳೂರಿನ ಖ್ಯಾತ ಶಾಸ್ತ್ರೀಯ ಸಂಗೀತಗಾರ ಶ್ರೀ ವಿದ್ಯಾಭೂಷಣ ಭಜನ್ ಸಂಧ್ಯಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿಟ್ಟೆ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಭಾಗವಹಿಸಲಿದ್ದಾರೆ. ಮಂಗಳೂರಿನ ಎಸ್‌ಸಿಎಸ್ ಆಸ್ಪತ್ರೆಯ ಚೇರ್ಮನ್ ಡಾ. ಜೀವರಾಜ್ ಸೊರಕೆ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಭಾರತೀಯ ಸೇನೆಯ ನಿವೃತ್ತ ಯೋಧ ಕ್ಯಾಪ್ಟನ್‌ಗಣೇಶ್ ಕಾರ್ಣಿಕ್ ಈ ಕಾರ್ಯ ಕ್ರಮದಲ್ಲಿ ಉಪಸ್ಥಿತಲಿರಲಿದ್ದಾರೆ. ನಂತರ ಸಂಜೆ 6:30ರಿಂದ ಖ್ಯಾತಗಾಯಕ ವಿದ್ಯಾಭೂಷಣ್ ಬೆಂಗಳೂರು ಅವರಿಂದ ಗಾನ ಸುಧೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News