ನ.12ರಂದು ‘ಭಾರತದ ಮುಸ್ಲಿಮರು ಮತ್ತು ಇತಿಹಾಸ’ ವಿಚಾರಗೋಷ್ಠಿ
ಮಂಗಳೂರು, ನ.10: ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆಯ ವತಿಯಿಂದ ಭಾರತದ ಮುಸ್ಲಿಮರು ಮತ್ತು ಇತಿಹಾಸ ವಿಷಯದಲ್ಲಿ ವಿಚಾರಗೋಷ್ಠಿ ನ.12ರಂದು ಸಂಜೆ 5ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ.
ಮಂಗಳೂರು ಪ್ರೆಸ್ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶಾಂತಿ ಪ್ರಕಾಶನದ ಕಾರ್ಯದರ್ಶಿ ಅಬ್ದುಸ್ಸಲಾಮ್ ಯು., ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞ ಮುಂಬೈಯ ಡಾ.ರಾಮ್ ಪುಣಿಯಾನಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಯೆನೆಪೊಯ ವಿಶ್ವವಿದ್ಯಾನಿಲಯದ ಸ್ಥಾಪಕ ಉಪಕುಲಪತಿ ಪ್ರೊ.ಸೈಯದ್ ಅಕೀಲ್ ಅಹ್ಮದ್, ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆ.ಟಿ.ಹುಸೈನ್ ಬರೆದಿರುವ ಅರಫಾ ಮಂಚಿ ಅನುವಾದಿಸಿರುವ ‘ಭಾರತದ ಸಾಮಾಜಿಕ ವಿಕಸನ ಮತ್ತು ಮುಸ್ಲಿಮರು’ ಎಂಬ ಪುಸ್ತಕ ಬಿಡುಗಡೆಗೊಳ್ಳಲಿದೆ. ಪ್ರಸಕ್ತ ಸನ್ನಿವೇಶದಲ್ಲಿ ಮುಸ್ಲಿಮರ ಇತಿಹಾಸವನ್ನು ಅಳಿಸಿ ಹಾಕುವ ಷಡ್ಯಂತ್ರ ನಡೆಯುತ್ತಿದೆ. ಪಠ್ಯಪುಸ್ತಕಗಳಿಂದಲೂ ತೆಗೆದು ಹಾಕಲಾಗುತ್ತಿದೆ. ನಗರಗಳ ಹೆಸರನ್ನು ಬದಲಾಯಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ಕೃತಿಗೆ ವಿಶೇಷ ಮಹತ್ವವಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಚಾಲಕ ಕೆ.ಎಂ.ಅಶ್ರಫ್, ಉಪ ಸಂಚಾಲಕ ಅಮೀನ್ ಅಹ್ಸನ್, ಶಾಂತಿ ಪ್ರಕಾಶನ ಟ್ರಸ್ಟ್ನ ಸದಸ್ಯ ಶಮೀರಾ ಜಹಾನ್, ಮಹಿಳಾ ವಿಭಾಗದ ಸಂಚಾಲಕಿ ಸಾಜಿದಾ ಮೂಮಿನ್ ಉಪಸ್ಥಿತರಿದ್ದರು.