×
Ad

ಪಿಎಂ ಸ್ವನಿಧಿ ಸಮೃದ್ಧಿ ಮೇಳದಲ್ಲಿ 202 ಮಂದಿ ಭಾಗಿ ಆನ್‌ಲೈನ್ ಮೂಲಕ 13 ಮಂದಿ ಫಲಾನುಭವಿಗಳು ಅರ್ಜಿ

Update: 2024-02-28 23:14 IST

ಮಂಗಳೂರು: ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬುಧವಾರ ನಡೆದ ಬೀದಿ ಬದಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಲ್ಲಿ ಸಾಲ ಸೌಲಭ್ಯ ಒದಗಿಸುವ ಸ್ವನಿಧಿ ಸಮೃದ್ಧಿ ಮೇಳದಲ್ಲಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸುಮಾರು 202 ಮಂದಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.

13 ಮಂದಿ ಆನ್‌ಲೈನ್ ಮೂಲಕ ಹೊಸ ಅರ್ಜಿ ಸಲ್ಲಿಸಿದರು. ಈ ಪೈಕಿ 10 ಸಾವಿರ ರೂ.ಗಳಿಗೆ 8 ಮಂದಿ 50 ಸಾವಿರ ರೂ. ಸಾಲಕ್ಕೆ 2 ಮತ್ತು 20 ಸಾವಿರ ರೂ.ಗಳಿಗೆ 3 ಮಂದಿ ಅರ್ಜಿ ಸಲ್ಲಿಸಿದರು.

ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ, ಪಿಎಂ ಸ್ವನಿಧಿ ಯೋಜನೆ ಅಡಿ ಸಾಲ ಪಡೆಯದೆ ಇರುವ ಬೀದಿಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯವು ಪ್ರಥಮ ಹಂತದಲ್ಲಿ ರೂ.10,000 ತದನಂತರ ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡುವವರಿಗೆ ಬಡ್ಡಿ ಸಹಾಯಧನ ಸೌಲಭ್ಯದೊಂದಿಗೆ ಸಾಲ ಮರುಪಾವತಿಸಿದ ಬಳಿಕ ದ್ವಿತೀಯ ಹಂತದಲ್ಲಿ ರೂ. 20,000, ತೃತೀಯ ಹಂತದಲ್ಲಿ ರೂ 50,000, ಸಾಲ ದೊರೆಯಲಿದೆ. ಡಿಜಿಟಲ್ ವ್ಯವಹಾರವನ್ನು ಮಾಡುವ ಬೀದಿಬದಿ ವ್ಯಾಪಾರಿಗಳಿಗೆ ವಾರ್ಷಿಕ ರೂ. 1,200 ಕ್ಯಾಶ್ ಬ್ಯಾಕ್ ದೊರೆಯಲಿದೆ ಯೋಜನೆಯ ನಗರ ಅಭಿಯಾನದ ಜಿಲ್ಲಾ ವ್ಯವಸ್ಥಾಪಕರಾದ ಅಚ್ಚುತ ನಾಯಕ್ ಎಂ ತಿಳಿಸಿದ್ದಾರೆ.

ಪಿಎಂ ಸ್ವನಿಧಿ ಯೋಜನೆ ಅಡಿ ಬೀದಿ ಬದಿ ವ್ಯಾಪಾರಿಗಳಿಗೆ ನೀಡುವ ಸಾಲ ಸೌಲಭ್ಯವನ್ನು ಹಾಲು ಮತ್ತು ದಿನಪತ್ರಿಕೆ ವಿತರಕರು, ಡೋಬಿ ಮತ್ತು ಇಸ್ತ್ರಿ ಸೇವೆ, ಹಳೆಯ ಪಾತ್ರೆಗಳನ್ನು ವ್ಯಾಪಾರ ಮಾಡುವವರು, ಬಡಗಿ, ಚಮ್ಮಾರರು, ಬಿದಿರಿನ ಬುಟ್ಟಿ, ಬೊಂಬು ಬಾಸ್ಕೆಟ್, ಏಣಿ ವ್ಯಾಪಾರಸ್ಥರು, ಹೂವಿನ ಕುಂಡಗಳನ್ನು ಮಾಡುವವರು, ನೇಯ್ಗೆಗಾರರು, ಎಳನೀರು ಮಾರಾಟಗಾರರು, ಆಹಾರ ತಯಾರಿಸಿ ಮಾರಾಟ ಮಾಡುವವರು (ಕ್ಯಾಟರಿಂಗ್ ಸರ್ವಿಸ್) ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡವರಿಗೂ ಕೂಡ ಯೋಜನೆಯ ಸವಲತ್ತುಗಳನ್ನು ವಿಸ್ತರಿಸಲಾಗಿದೆ.

ವಸತಿಯೋಜನೆಗೆ 184 ಫಲಾನುಭವಿಗಳಿಂದ ದಾಖಲೆ ಸಲ್ಲಿಕೆ:

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಇಡ್ಯಾ ಗ್ರಾಮ ಸರ್ವೇ ಸಂಖ್ಯೆ 16ಪಿ 1ರಲ್ಲಿ ನಿರ್ಮಾಣ ಹಂತದಲ್ಲಿರುವ ಜಿ +3 ಮಾದರಿಯ ವಸತಿ ಯೋಜನೆಗೆ ಈಗಾಗಲೇ ಆಯ್ಕೆಗೊಂಡಿರುವ 600 ಫಲಾನುಭವಿಗಳ ಪೈಕಿ 184 ವಸತಿ ಫಲಾನುಭವಿಗಳು ಬುಧವಾರ ಪರಿಷ್ಕೃತ ದಾಖಲೆ ಪತ್ರಗಳನ್ನು ಸಲ್ಲಿಸಿದರು. ದಾಖಲೆಗಳನ್ನು ಸಲ್ಲಿಸಿರುವ ಫಲಾನುಭವಿಗಳ ಈ ಯೋಜನೆಯಲ್ಲಿ ಮನೆಗೆ ಸಾಲ ಪಡೆಯಲು ಬ್ಯಾಂಕಿಗೆ ಅರ್ಜಿಗಳನ್ನು ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ನಗರ ಅಭಿಯಾನ ವ್ಯವಸ್ಥಾಪಕ ಚಿತ್ತರಂಜನದಾಸ್ ಮಾಹಿತಿ ನೀಡಿದ್ದಾರೆ.

ಈ ಯೋಜನೆಯಲ್ಲಿ ಸಾಮಾನ್ಯ 330, ಎಸ್ಸಿ 58, ಎಸ್ಟಿ 13, ಹಾಗೂ 199 ಅಲ್ಪಸಂಖ್ಯಾತ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಈಗಾಗಲೇ ಆಯ್ಕೆಯಾಗಿರುವ ಫಲಾನುಭವಿಗಳಿಂದ ವಂತಿಕೆ ಕ್ರೋಢಿಕರಿಸಲು 600 ಫಲಾನುಭವಿಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. 390 ಫಲಾನುಭವಿಗಳು ವಂತಿಕೆಯನ್ನು ಪಾವತಿಸಿದ್ದಾರೆ.

ಯೋಜನೆಗೆ ರೂ. 40 ಕೋಟಿ ಯೋಜನಾ ವೆಚ್ಚದಲ್ಲಿ ಫಲಾನುಭವಿಗಳಿಂದ ಒಟ್ಟು ರೂ. 1143.20 ರೂ. ಲಕ್ಷ ವಂತಿಕೆ ಸಂಗ್ರಹಿಸಬೇಕಾಗಿರುತ್ತದೆ. ಫಲಾನುಭವಿಗಳ ವಂತಿಕೆ ರೂ. 1 ಕೋಟಿ ಸಂಗ್ರಹವಾಗಿದ್ದು, ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಬಾಕಿ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಸಾಲದ ಮೂಲಕ ಮತ್ತು ಉಳಿದ ಫಲಾನುಭವಿಗಳ ವಂತಿಕೆಯಿಂದ ಪಾವತಿಸಬೇಕಾದಿದೆ, ಫಲಾನುಭವಿಯು ಬ್ಯಾಂಕ್ ಸಾಲ ಪಡೆಯಲು ಅವಶ್ಯಕ ದಾಖಲೆಗಳನ್ನು ಸಲ್ಲಿಸಬೇಕಾಗಿದೆ.

ಕಾರ್ಯಕ್ರಮ ದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ರವಿ ಕುಮಾರ್ , ಮಂಗಳೂರು ಮಹಾನಗರ ಪಾಲಿಕೆ ಸಮುದಾಯ ವ್ಯವಹಾರ ಅಧಿಕಾರಿ ಮಾಲಿನಿ ರೋಡ್ರಿಗಸ್, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ರಾಹುಲ್ ಕುಮಾರ್ ಉಪಸ್ಥಿತರಿದ್ದರು.

ಗುತ್ತಿಗೆದಾರನಿಗೆ 2496.33 ಲಕ್ಷ ರೂ. ಪಾವತಿ

ಇಡ್ಯಾದ ಸರ್ವೆ ನಂಬ್ರ 16ಪಿ1 ರಲ್ಲಿನ 3.86 ಎಕ್ರೆ ಜಾಗದಲ್ಲಿ ವಸತಿ ಸಂಕೀರ್ಣ ನಿರ್ಮಿಸುವ ಯೋಜನೆಗೆ 2018ರಲ್ಲಿ ಆಡಳಿತಾತ್ಮಕ ಅನುಮತಿ ದೊರೆತಿತ್ತು.2019ರಲ್ಲಿ ಟೆಂಡರ್ ಕರೆಯಲಾಗಿತ್ತು. 40 ಕೋಟಿ ರೂ ವೆಚ್ಚದ ಕಾಮಗಾರಿಯನ್ನು ಮಾ.29, 2024ರ ಮೊದಲು ಗುತ್ತಿಗೆದಾರರು ಪೂರ್ಣಗೊಳಿಸಬೇಕಾಗಿದೆ.

ಅಹ್ಮದಾಬದ್‌ನ ಎಂ.ಎಸ್.ಜ್ಯೋತಿ ಇನ್‌ಫ್ರಾಟೆಕ್ ಕಂಪೆನಿಗೆ ಗುತ್ತಿಗೆ ನೀಡಲಾಗಿದ್ದು, ಈಗಾಗಲೇ 2496.33 ಲಕ್ಷ ರೂ. ಹಣವನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಆಯ್ಕೆಯಾಗಿರುವ ಎಲ್ಲ ಫಲಾನುಭವಿಗಳು ಪಾವತಿಸಬೇಕಾದ ಮೊತ್ತವನ್ನು ಪಾವತಿಸದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News