ಡಿ.22ರಂದು ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನ ಸಮಾರೋಪ
ಮಂಗಳೂರು, ಡಿ.20: ಮಾನವ ಧರ್ಮ, ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್ ಅವರ ಸಂದೇಶ ಪ್ರಚಾರದ ಸಲುವಾಗಿ ಯುನಿವೆಫ್ ಕರ್ನಾಟಕದ ವತಿಯಿಂದ 2023ರ ಅ.6 ರಿಂದ ಆರಂಭವಾದ ‘‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನ ಡಿಸೆಂಬರ್ 22ರಂದು ಸಮಾರೋಪಗೊಳ್ಳಲಿದೆ ಎಂದು ಯುನಿವೆಫ್ ಕರ್ನಾಟಕ ಕಾರ್ಯದರ್ಶಿ ಯು. ಕೆ. ಖಾಲಿದ್ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಡಿ. 22 ರಂದು ಸಂಜೆ 6:45ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ‘ಮಾನವ ಧರ್ಮ, ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್ ಕುರಿತ ಸಂವಾದ ನಡೆಯಲಿದೆ. ಬಾರ್ಕೂರು ಮಹಾಸಂಸ್ಥಾನದ ವಿಶ್ವಸಂತೋಷ ಭಾರತಿ ಶ್ರೀಪಾದರು ಮತ್ತು ಬಲ್ಮಠ ಕರ್ನಾಟಕ ಥಿಯೋಲೋಜಿಕಲ್ ಕಾಲೇಜಿನ ಪ್ರಾಂಶುಪಾಲ ರೆ. ಪ್ರೊ. ಎಚ್. ಎಂ. ವಾಟ್ಸನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಯುದ್ದೀನ್ ಕುದ್ರೋಳಿ ಅವರು ಅಧ್ಯಕ್ಷತೆ ವಹಿಸಿ ಸಮಾರೋಪ ಭಾಷಣ ಮಾಡಲಿದ್ದಾರೆ’ ಎಂದರು
ಧಾರ್ಮಿಕ ಸಾಮರಸ್ಯ ಕಾಪಾಡಲು ಸತತ 18 ವರ್ಷಗಳಿಂದ ಪ್ರತಿ ವರ್ಷವೂ ಈ ಅಭಿಯಾನ ಹಮ್ಮಿಕೊಳ್ಳುತ್ತಿದ್ದೇವೆ. ಪ್ರವಾದಿ ಅವರ ಬೋಧನೆ ಕುರಿತ ಅಪನಂಬಿಕೆ ದೂರ ಮಾಡಿ, ಅವರ ನಿಜವಾದ ಸಂದೇಶ ಸಾರುವುದು ಈ ಅಭಿಯಾನದ ಉದ್ದೇಶ ಎಂದರು.
ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಸಂಚಾಲಕ ಸೈಫುದ್ದೀನ್ ಕುದ್ರೋಳಿ, ಸಹ ಸಂಚಾಲಕ ಉಬೈದುಲ್ಲಾ ಬಂಟ್ವಾಳ, ಅಬ್ದುಲ್ಲಾ ಪಾರಿ, ನೌಫಾಲ್ ಹಸನ್, ಮಹಮ್ಮದ್ ಹನೀಫ್, ಮಹಮ್ಮದ್ ಆಸಿಫ್ ಉಪಸ್ಥಿತರಿದ್ದರು.